ಮಂಗಳೂರು,ಜ 10 (MSP):ಎಂಆರ್ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದ್ದು ಇದನ್ನು ನಾಗರಿಕ ಹೋರಾಟ ಸಮಿತಿ ವಿರೋಧಿಸಿ ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪೊರಕೆ ಮೆರವಣಿಗೆ ಮತ್ತು ಧರಣಿ ಕಾರ್ಯಕ್ರಮವು ಜ 10 ರ ಗುರುವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ನಾಗರಿಕ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ ಅವರು ಎಂಆರ್ಪಿಎಲ್ ಕೋಕ್ ಸಲ್ಫರ್ ಘಟಕದಿಂದ ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಾಗುತ್ತಿದ್ದು, ಜಿಲ್ಲಾಡಳಿತವೂ ಕೂಡಾ ಕಂಪೆನಿಯ ಜೊತೆ ಶಾಮೀಲಾಗಿ ಜನತೆಯ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ಈ ಹಿಂದೆ ಜೋಕಟ್ಟೆ, ಕಳವಾರು, ತೋಕೂರು ಹಾಗೂ ಸ್ಥಳೀಯ ಜನರ ಹೋರಾಟದ ಫಲವಾಗಿ ಸರಕಾರ ಹೊರಡಿಸಿದ ಆರು ಅಂಶಗಳ ಪರಿಹಾರ ಕ್ರಮದ ಆದೇಶವನ್ನು ಎಂಆರ್ಪಿಎಲ್ ಜಾರಿಗೆ ತರದೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಆದೇಶ ನಿಡಿ ವರ್ಷಗಳು ಕಳೆದರೂ ಎಂಆರ್ಪಿಎಲ್ ಸಂಸ್ಥೆ ಅದನ್ನು ಜಾರಿಗೆ ತಂದಿಲ್ಲ. ಈ ಬಗ್ಗೆ ಸಂಸ್ಥೆಯ ಮೇಲೆ ಜಿಲ್ಲಾಧಿಕಾರಿಗಳೂ ಮೃದುಧೋರಣೆ ತಳೆದಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.
ಈ ಸಂದರ್ಭ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ಜೋಕಟ್ಟೆ ಗ್ರಾಪಂ ಸದಸ್ಯರಾದ ಅಬೂಬಕರ್, ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು