ಮಂಗಳೂರು, ಮೇ 31 (DaijiworldNews/HR): ಕಣ್ಣೂರಿನಲ್ಲಿ ಎಸ್.ಡಿ.ಪಿ.ಐ ಪಕ್ಷವು ಆಯೋಜಿಸಿದ ಜನಾಧಿಕಾರ ಕಾರ್ಯಕ್ರಮದ ಸಂದರ್ಭದಲ್ಲಿ ಮಂಗಳೂರು ಪೂರ್ವ ಠಾಣೆಯ ಎಎಸ್ಐ ಚಂದ್ರಶೇಖರ ಮತು ಸಿಬ್ಬಂದಿಯವರನ್ನು ನಿಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹಾಗೂ ಅವರಿಗೆ ಆಶ್ರಯ ನೀಡಿದವರನ್ನು ಸೇರಿ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ನೌಷಾದ್(28), ಹೈದರಾಲಿ(27), ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಬಶೀರ್ (40), ಜುಬೇರ್ (32), ಜಲೀಲ್ (25), ೧) ಮೊಹಮ್ಮದ್ ಯಾಸೀನ್ (25), ಅಫ್ರೀದ್ ಸಾಗ್(19), ಮೊಹಮ್ಮದ್ ತುಫೇಲ್(19) ಎಂದು ಗುರುತಿಸಲಾಗಿದೆ.
ಮೇ 27 ರಂದು ಕಣ್ಣೂರಿನ ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಕೆಟಿಎಂ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು, ಸ್ಕೂಟರ್ನಲ್ಲಿ ತೆರಳುತ್ತಿದ್ದ ಇಬ್ಬರು, ಕಾರು ಚಾಲಕ ಹಾಗೂ ಇತರರು ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿ ಘೋಷಣೆಗಳನ್ನು ಕೂಗಿರುವ ವೀಡಿಯೋ ವೈರಲ್ ಆಗಿತ್ತು. ನಿಂದಿಸಿದ ವ್ಯಕ್ತಿಗಳ ಪೈಕಿ ಓರ್ವ ಕೈಯಲ್ಲಿ ಎಸ್ಡಿಪಿಐ ಧ್ವಜ ಹಿಡಿದುಕೊಂಡಿದ್ದ. ಕಾರ್ಯಕ್ರಮದ ಬಂದೋಬಸ್ತ್ನಲ್ಲಿದ್ದ ಪೊಲೀಸ್ ಸಿಬಂದಿಗಳಿಗೆ ಪಡೀಲ್ ಕಡೆಯಿಂದ ಬಂದ ಆರೋಪಿಗಳು ಬ್ಯಾರಿ ಭಾಷೆಯಲ್ಲಿ ನಿಂದಿಸುತ್ತಾ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಅದರೊಂದಿಗೆ ಕರ್ತವ್ಯನಿರತರಾಗಿದ್ದ ಪಿ.ಸಿ. ಸಂಗನಗೌಡ ಅವರ ಮೇಲೆ ವಾಹನ ಹತ್ತಿಸಲು ಮುಂದಾಗಿದ್ದಾರೆ. ಅವರು ಪಕ್ಕಕ್ಕೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ.ಬಿ ಅವರು ದೂರು ನೀಡಿದ್ದು, ಇದೀಗ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.
ಇನ್ನು ಆರೋಪಿಗಳನ್ನು ಮತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತು ಮೈಸೂರಿನಿಂದ ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಮುಖ ಆರೋಪಿತಗಳ ನೌಷಾದ್ ಮತು ಹೈದರಾಲಿ ರವರು ತಾವು ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವೀಡಿಯೋಗಳು ವಾಟ್ಸಪ್ನಲ್ಲಿ ವೈರಲ್ ಆಗಿದು , ಇದನ್ನು ನೋಡಿ ಪ್ರಭಾವಿತರಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದು, ಅಲ್ಲದೇ ತಾವು ಕಾರ್ಯಕ್ರಮ ಮುಗಿದ ಕೂಡಲೇ ಮೈಸೂರು ಮತ್ತು ಬೆಂಗಳೂರಿಗೆ ಹೋಗಿ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತು ಅಲ್ಲಿಂದ ಮುಂದೆ ಕೇರಳ,
ಕಾಸರಗೋಡು ಪರಿಸರದಲ್ಲಿ ಆಶ್ರಯ ಪಡೆದು ಪೊಲೀಸರಿಗೆ ಸಿಗದಂತೆ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.