ಉಡುಪಿ, ಮೇ 31 (DaijiworldNews/HR): ಹಿಜಾಬ್ ಗೆ ಅವಕಾಶ ಇಲ್ಲ ಎಂದು ಹೈಕೋರ್ಟ್ ಈಗಾಗಲೇ ಸ್ವಷ್ಟ ಮಾಡಿದ್ದು, ಈ ನೆಲದ ಕಾನೂನನ್ನು ಎಲ್ಲರೂ ಪಾಲನೆ ಮಾಡಬೇಕು. ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುತ್ತೇವೆ ಎಂದರೆ ಅವರ ಮೇಲೆ ಕಠಿಣ ಕ್ರಮ ಆಗಬೇಕು. ಇಲ್ಲದಿದ್ದರೆ ಇದು ಮುಂದೆ ದೇಶದ್ರೋಹಿ, ಸಮಾಜದ್ರೋಹಿ ಚಟುವಟಿಕೆಗೆ ಕಾರಣ ಆಗಬಹುದು ಎಂದು ಕೇಂದ್ರ ಕೃಷಿ ಸಚಿವೆ ಶೋಬಾ ಕರಂದ್ಲಾಂಜೆ ಹೇದ್ದಾರೆ.
ಮಳಲಿ ಮಸೀದಿಯ ಒಂದು ಹಿಡಿ ಮಣ್ಣನ್ನು ಕೂಡಾ ನೀಡಲ್ಲ ಎಂಬ ಎಸ್ಡಿಪಿಐ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲವನ್ನೂ ಕೇಂದ್ರ ಮತ್ತು ರಾಜ್ಯ ಸರಕಾರ ಗಮನಿಸುತ್ತಿದೆ. ಯಾವುದು ಹಿಂದೂಗಳಿಗೆ ಸೇರಬೇಕು, ಇತಿಹಾಸದಲ್ಲಿ ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬೇಕು. ಹಲವಾರು ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ಕಟ್ಟಲಾಗಿದೆ. ಆದರೆ ನಾವ್ಯಾರು ಇದಕ್ಕೆ ಸಾಕ್ಷಿಗಳಾಗಿರಲಿಲ್ಲ. ಆದರೆ ನಮ್ಮ ಹಿರಿಯರಿಂದ ಕೆಲವೊಂದು ತಪ್ಪುಗಳು ಆಗಿವೆ. ಇದನ್ನು ಇತಿಹಾಸ ತಜ್ಞರು ಉತ್ಖನನ ಮಾಡಿ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸಬೇಕು ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಬರ್ಕಾಸ್ತಿಗೆ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಮಕ್ಕಳು ನಮ್ಮ ಚರಿತ್ರೆಯನ್ನು ಕಲಿಯಬೇಕು. ನಮ್ಮ ಇತಿಹಾಸದಲ್ಲಿ ಆಗಿರುವ ಲೋಪದೋಷಗಳನ್ನು ತಿಳಿದುಕೊಳ್ಳಬೇಕು. ಬ್ರಿಟಿಷರು ದೇಶಕ್ಕೆ ಯಾಕೆ ಬಂದರು? ಮೊಘಲರು ಈ ದೇಶಕ್ಕೆ ಯಾಕೆ ಬಂದರು? ಘಜ್ನಿ ಮಹಮ್ಮದ್ 18 ಬಾರಿ ದಾಳಿ ಮಾಡಿದ್ದು ಯಾಕೆ? ನಮ್ಮ ಸಮಸ್ಯೆ ನಮ್ಮ ಕೊರತೆ ಏನು? ಎಲ್ಲವನ್ನು ನಮ್ಮ ಮಕ್ಕಳು ಅಧ್ಯಯನ ಮಾಡಬೇಕು. ನಮ್ಮ ಮಕ್ಕಳು ಡಿಗ್ರಿ ಮಾಡಿದರೂ ದೇಶದ ಚರಿತ್ರೆ ಗೊತ್ತಿರುವುದಿಲ್ಲ ಎಂದಿದ್ದಾರೆ.
ಇನ್ನು ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವ್ಯಕ್ತಿ ಅಥವಾ ಸಮಿತಿಯ ಬಗ್ಗೆ ನಾನು ಮಾತನಾಡಲ್ಲ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ರಾಜ್ಯ ನಮ್ಮದು. ನಮ್ಮ ಕನ್ನಡ ಸಾಹಿತ್ಯ ಸತ್ವಯುತವಾಗಿದೆ, ಕನ್ನಡದ ಸಾಹಿತಿ ಕವಿಗಳಲ್ಲಿ ಅಷ್ಟೊಂದು ತಾಕತ್ತು ಇದೆ. ನಮ್ಮ ರಾಜ್ಯದ ಏಕೀಕರಣ ದಂತಹ ವಿಚಾರಗಳು ಕೂಡ ಮಕ್ಕಳಿಗೆ ತಿಳಿಯುವಂತಾಗಬೇಕು. ವಿವಾದ ಇಲ್ಲದಂತಹ ವ್ಯಕ್ತಿಗಳನ್ನು ಸಮಿತಿಯಲ್ಲಿ ಜೋಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಎಲ್ಲರನ್ನೂ ಖುಷಿಪಡಿಸುವುದು ಕಷ್ಟ, ಎಲ್ಲರೂ ಸಮಾನ ಎನ್ನುವ ರೀತಿಯಲ್ಲಿ ಪರಿಷ್ಕರಣೆ ಯಾಗಬೇಕು. ಮಕ್ಕಳ ಮನಸ್ಸನ್ನು ಪುಳಕಗೊಳಿಸುವ, ವಿಕಸಿತ ಗೊಳಿಸುವ ಪಠ್ಯಗಳು ಬರಬೇಕು ಎಂದರು.
ಲವ್ ಜಿಹಾದ್ ಪ್ರಕರಣದ ಕುರಿತು ಮಾತನಾಡಿದ ಅವರು, ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳನ್ನು ನರಕದ ಕೂಪಕ್ಕೆ ತಳ್ಳುವ ಪ್ರಕ್ರಿಯೆ. ಪ್ರೀತಿಯ ಹೆಸರಲ್ಲಿ ಮದುವೆಯಾಗುತ್ತಾರೆ ಅಥವಾ ಮದುವೆಯಾಗದೆ ಮೋಸ ಮಾಡುತ್ತಾರೆ. ಕೈಗೊಂದು ಮಗುವನ್ನು ಕೊಟ್ಟು ಓಡಿ ಹೋಗುತ್ತಾರೆ. ನಂತರ ತಲಾಖ್ ಎಂದು ಹೇಳಿ ಇನ್ನೊಬ್ವರನ್ನು ಮದುವೆಯಾಗುತ್ತಾರೆ. ದೇಶದ ಅನೇಕ ಭಾಗಗಳಲ್ಲಿ ನಮ್ಮ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಲವ್ ಜಿಹಾದ್ ಒಂದು ಪಿಡುಗು ತಕ್ಷಣ ಕೊನೆಯಾಗಬೇಕು. ಲವ್ ಜಿಹಾದಿಗೆ ಹೆಣ್ಣುಮಕ್ಕಳು ಬಲಿಯಾದರೆ ತಂದೆ-ತಾಯಿಯ ದುಃಖ ಕೇಳುವವರ್ಯಾರು? ಲವ್ ಜಿಹಾದ್ ತಡೆಗೆ ಬಲವಾದ ಕಾನೂನು ಜಾರಿ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ರೈತ ನಾಯಕ ಟಿಕಾಯತ್ ಗೆ ಮಸಿ ಬಳೆದ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ಹೋರಾಟಗಾರರ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಪ್ರಜಾತಂತ್ರದಲ್ಲಿ ಹೋರಾಟಕ್ಕೆ ಬಲವಿದೆ. ಲೋಕಸಭೆ ರಾಜ್ಯಸಭೆ ವಿಧಾನಸಭೆ ವಿಧಾನ ಪರಿಷತ್ ಗಳಲ್ಲಿ ಪ್ರತಿಪಕ್ಷಕ್ಕೆ ದೊಡ್ಡ ತಾಕತ್ತು ಇದೆ. ಸರಕಾರದ ಲೋಪದೋಷ ಳನ್ನು ಸರಿಪಡಿಸಿ ಎಚ್ಚರಗೊಳಿಸುವ ಕೆಲಸ ಹೋರಾಟದಿಂದಲೇ ಸಾಧ್ಯ. ಟಿಕಾಯತ್ ತನ್ನದೇ ಒಂದು ವಿಚಾರ ಇಟ್ಟು ಹೋರಾಟ ನಡೆಸುತ್ತಿದ್ದಾರೆ. ಅದರಿಂದ ರೈತರಿಗೆ ಎಷ್ಟು ಲಾಭ ಆಯ್ತು ನಷ್ಟ ಆಯ್ತು ? ಅನ್ನೋದನ್ನು ಅವರೇ ಅವಲೋಕನ ಮಾಡಲಿ ಆದರೆ ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ವೈಯಕ್ತಿಕ ದ್ವೇಷ ಕಾರುವುದು ಸರಿಯಲ್ಲ ಎಂದಿದ್ದಾರೆ.