ಮಂಗಳೂರು, ಮೇ 31( (DaijiworldNews/MS): ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇತ್ತೀಚೆಗೆ ಉಂಟಾದ ಹಿಜಾಬ್ ಧರಿಸುವ ಕುರಿತ ವಿವಾದಕ್ಕೆ ಸಂಬಂಧಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ತೆಗೆದುಕೊಂಡಿರುವ ನಿರ್ಧಾರವನ್ನು ಅನುಸರಿಸುವಂತೆ ದ.ಕ.ಜಿಲ್ಲಾಧಿಕರಿ ಡಾ.ರಾಜೇಂದ್ರ ಕೆ.ವಿ ಅವರು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದ್ದಾರೆ.
ಹಿಜಾಬ್ ಧರಿಸಲು ಅವಕಾಶ ಇಲ್ಲದ ವಿಶ್ವವಿದ್ಯಾಲಯದ ಸಿಂಡಿಕೇಟ್ ನಿರ್ಧಾರವನ್ನು ಒಪ್ಪದ ಕೆಲವು ಮುಸ್ಲಿಂ ವಿದ್ಯಾರ್ಥಿನಿಯ ಸೋಮವಾರ ಹಿಜಾಬ್ ಧರಿಸಿ ಕಾಲೇಜಿಗೆ ಬಂದಿದ್ದರು. ಆದರೆ ಅವರಿಗೆ ಪ್ರವೇಶ ನೀಡಿರಲಿಲ್ಲ . ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಜತೆ ಮಾತುಕತೆ ನಡೆಸಿದರು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರೊಂದಿಗಿನ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ರಾಜೇಂದ್ರ, 'ವಿಶ್ವವಿದ್ಯಾಲಯದ ಸಿಂಡಿಕೇಟ್ ತೆಗೆದುಕೊಳ್ಳುವ ನಿರ್ಧಾರದಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ವಿಶ್ವವಿದ್ಯಾನಿಲಯಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಕಾಲೇಜುಗಳು ಬದ್ಧವಾಗಿರಬೇಕು. ಕಾನೂನು ಪಾಲನೆ ಮಾಡದೆ ಶಾಂತಿ ಕದಡದಂತೆ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದ್ದೇನೆ. ನಾನು ಅವರ ಅಹವಾಲು ಆಲಿಸಿದ್ದೇನೆ ಮತ್ತು ಅವರಿಗೆ ಕೆಲವು ವಿಷಯಗಳನ್ನು ಮನವರಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಯೂನಿವರ್ಸಿಟಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಕ್ರಿಯಿಸಿ, ''ಮಂಗಳೂರು ವಿವಿಯ ಸಿಂಡಿಕೇಟ್ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿಲ್ಲ. ರಾಜ್ಯದ ವಿವಿಧೆಡೆ ಭುಗಿಲೆದ್ದ ಹಿಜಾಬ್ ವಿವಾದಕ್ಕೂ ವಿಶ್ವವಿದ್ಯಾಲಯದ ಕಾಲೇಜಿನಲ್ಲಿಯೂ ಯಾವುದೇ ಸಂಬಂಧವಿಲ್ಲ. ಒತ್ತಡಕ್ಕೆ ಮಣಿದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.