ನವದೆಹಲಿ, ಜ 10 (MSP): ದೇಶದಾದ್ಯಂತ್ಯ ತೀವ್ರ ಕುತೂಹಲ ಹುಟ್ಟುಹಾಕಿದ್ದ ಅಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿಚಾರಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಮತ್ತೆ ಸುಪ್ರೀಂ ಕೋರ್ಟ್ ಜನವರಿ 29ಕ್ಕೆ ಮುಂದೂಡಿದೆ. ಜ.4ರ ಈ ಹಿಂದಿನ ವಿಚಾರಣೆಯಲ್ಲಿ ಒಂದೇ ನಿಮಿಷದಲ್ಲಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ವಿಚಾರ್ಅಣೆಯನ್ನು ಮುಂದಿನ ಆದೇಶವನ್ನು ಜನವರಿ 10ರಂದು ನೀಡಲಾಗುವುದು' ಎಂದಿತ್ತು. ಅಲ್ಲದೆ ಪ್ರಕರಣವನ್ನು ಹೊಸ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಳಿಸುವುದಾಗಿ ತಿಳಿಸಿತ್ತು.
ಆದರೆ ವಿಚಾರಣೆ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಉದಯ್ ಲಲಿತ್ ವಿಚಾರಣೆಯಿಂದ ಹಿಂದೆ ಸರಿದ ಹಿನ್ನಲೆಯಲ್ಲಿ ವಿಚಾರಣೆಯನ್ನು 29 ಕ್ಕೆ ಮುಂದೂಡಲಾಗಿದೆ. ಇಂದು ವಿಚಾರಣೆ ಆರಂಭಿಸಿದ ರಂಜನ್ ಗೊಗೊಯ್ ನೇತೃತ್ವದ ಪೀಠ 'ಅಯೋಧ್ಯೆ ಪ್ರಕರಣದಲ್ಲಿ ಇಂದು ವಿಚಾರಣೆ ನಡೆಯುವುದಿಲ್ಲ. ವಿಚಾರಣೆಯ ಅರ್ಜಿಗಳನ್ನು ಮಾತ್ರ ನಾವು ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ವಾದಿತ ಭೂಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. 2018ರ ಅಕ್ಟೋಬರ್ 29ರಂದು ಇವುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು 2019ರ ಜನವರಿ 4ರಂದು ನಡೆಸುವುದಾಗಿ ಹೇಳಿತ್ತು.