ಕುಂದಾಪುರ, ಮೇ 31 (DaijiworldNews/MS): ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಯಾನೆ ಕಟ್ಟೆ ಭೋಜಣ್ಣ (79) ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಬಂಧಿತ ಆರೋಪಿ ಮೊಳಹಳ್ಳಿ ಗಣೇಶ್ ಶೆಟ್ಟಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಗಣೇಶ್ ಶೆಟ್ಟಿ ಪರ ಕುಂದಾಪುರದ ವಕೀಲರಾದ ಕೆ.ಸಿ. ಶೆಟ್ಟಿ, ಟಿ.ಬಿ. ಶೆಟ್ಟಿ ಹಾಗೂ ದಿನೇಶ್ ವಕಾಲತ್ತು ವಹಿಸಿದ್ದು, ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರು ಜೂ.1ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ಜೂ. 1 ಕ್ಕೆ ಸರಕಾರಿ ಅಭಿಯೋಜಕರ ಆಕ್ಷೇಪಣೆ ಸಲ್ಲಿಕೆಗೆ ನ್ಯಾಯಾಧೀಶರು ಅವಕಾಶ ಕಲ್ಪಿಸಿದ್ದಾರೆ.
ಆರೋಪಿಯನ್ನು ಶುಕ್ರವಾರ ಬಂಧಿಸಿದ್ದು, ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಶನಿವಾರ ಉಡುಪಿ ಅಜ್ಜರಕಾಡಿನ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ನಾಪತ್ತೆಯಾಗಿರುವ ಮತ್ತೋರ್ವ ಆರೋಪಿ, ಬ್ರೋಕರ್ ಎಚ್. ಇಸ್ಮಾಯಿಲ್ ಪತ್ತೆಗಾಗಿ ಕುಂದಾಪುರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.