ವಿಟ್ಲ, ಮೇ 30 (DaijiworldNews/SM): ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಅಪ್ರಾಪ್ತ ಬಾಲಕಿಯ ಸಾವಿಗೆ ಕಾರಣನಾದ ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ವಿಟ್ಲದಲ್ಲಿ ಪ್ರತಿಭಟನೆ ನಡೆಯಿತು.
ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ಅವರು ಮಾತನಾಡಿ ದಲಿತ ಸಂಘಟನೆ ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ಧ್ವನಿಯಾಗಿ ಕೆಲಸ ನಿರ್ವಹಿಸಿದೆ. ನಾವು ಯಾವುದೇ ಧರ್ಮ, ಜಾತಿ, ಪಕ್ಷಗಳಿಗೆ ಸೀಮಿತವಾಗಿ ಕೆಲಸ ಮಾಡಿಲ್ಲ. ಶೋಷಿತವರ್ಗದವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟಿ ನಮ್ಮ ಯುವಕರನ್ನು ಜೈಲಿಗೆ ಅಟ್ಟುವ ಹಿಂದೂ ಸಂಘಟನೆಗಳು ನಮಗೆಬೇಡ ಎಂದರು.
ನಮಗೆ ವಿದ್ಯಾಭ್ಯಾಸ ಕೊಡಿ, ನ್ಯಾಯ ಒದಗಿಸುವ ಕೆಲಸಮಾಡಿ ನಿಮಗೆ ಖಂಡಿತಾ ನಾವು ಬೆಂಬಲ ನೀಡುತ್ತೇವೆ. ನಮ್ಮನ್ನು ಹಿಂದೂ ಧರ್ಮದವರ ವಿರುದ್ಧ ಎತ್ತಿಕಟ್ಟುವ ಮುಸ್ಲೀಂ ಸಂಘಟನೆಗಳು ನಮಗೆ ಬೇಡ. ನಮಗೆ ಬಸವಣ್ಣನವರ ತರಹದ ಹಿಂದುಗಳು ಬೇಕು, ಮಹಮ್ಮದ್ ಪೈಂಗಂಬರರಂತಹ ಮುಸಲ್ಮಾನರು ಬೇಕು. ನಮ್ಮನ್ನು ಬಳಸಿಕೊಂಡು ನಮ್ಮನ್ನು ಇತರರ ವಿರುದ್ಧ ಎತ್ತಿಕಟ್ಟುವ ಸಂಘಟನೆಗಳು ನಮಗೆಬೇಡ ಎಂದು ಹೇಳಿದರು.