ಕಾಸರಗೋಡು, ಮೇ 30 (DaijiworldNews/SM): ಜಿಲ್ಲಾ ನಾಗರಿಕ ಹಾಗೂ ಪೂರೈಕೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಕಾಸರಗೋಡು ನಗರದ ಮಾರುಕಟ್ಟೆಯಲ್ಲಿ ಕಾಳಸಂತೆಯಲ್ಲಿ ಮಾರಾಟಕ್ಕೆ ದಾಸ್ತಾನಿಡಲಾಗಿದ್ದ ಸುಮಾರು 150 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಮೀನು ಮಾರುಕಟ್ಟೆ ಪರಿಸರದ ಕಟ್ಟಡವೊಂದರಲ್ಲಿ ಗೋಣಿ ಚೀಲದಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನಿಡಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಸಬ್ಸಿಡಿ ದರದಲ್ಲಿ ವಿತರಿಸಬೇಕಿದ್ದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ನಾಗರಿಕ ಮತ್ತು ಪೂರೈಕೆ ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.
ಆದರೆ ಮಾಲಕನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತಾಲೂಕು ಅಧಿಕಾರಿ ಕೆ.ಪಿ. ಸಜಿಮೋನ್, ಜಿಲ್ಲಾ ನಾಗರಿಕ ಹಾಗೂ ಪೂರೈಕೆ ಪ್ರಭಾರ ಅಧಿಕಾರಿ ಕೆ.ಎನ್.ಬಿಂದು, ಎಂ.ವಿ. ಶೀನಿವಾಸನ್, ಕೆ . ಅಜಯ್ ಕುಮಾರ್, ಕೆ. ಸಂಜಯ್ ಕುಮಾರ್ ಮೊದಲಾದವರು ನೇತೃತ್ವ ನೀಡಿದರು.