ಕುಂದಾಪುರ, ಮೇ 30 (DaijiworldNews/MS): ಇಲ್ಲಿ ಚಿಕಿತ್ಸೆಗೆ ಬಂದ ರೋಗಿಗಳನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸುತ್ತಿರಿ ಎನ್ನುವ ಆರೋಪವಿದೆ. ಹಾಗೆ ಮಾಡಬೇಡಿ. ಇದು ಸರಕಾರಿ ಆಸ್ಪತ್ರೆ. ಇಲ್ಲಿ ರೋಗಿಗಳಿಗೆ ಸೇವೆ ಸಿಗಬೇಕು. ರೋಗಿಗಳ ಸ್ಥಿತಿ ಗಂಭೀರವಾಗಿದ್ದರೆ, ಆ ಚಿಕಿತ್ಸೆ ಇಲ್ಲಿ ಲಭ್ಯವಿಲ್ಲದಿದ್ದರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಬಹುದು. ಅನಗತ್ಯವಾಗಿ ಇಲ್ಲಿ ಎಲ್ಲಾ ವ್ಯವಸ್ಥೆಯಿದ್ದು ರೋಗಿಗಳನ್ನು ಉಡುಪಿಗೆ ಕಳಿಸಬೇಡಿ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಅವರು ಮೇ.30ರಂದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯುವಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಯೋಗಕ್ಷೇಮ ವಿಚಾರಿಸಿದರು.ಆಸ್ಪತ್ರೆಯಲ್ಲಿ ನೀರಿನ ವ್ಯತ್ಯಯವನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದರು. ಡೆಂಗ್ಯು ಸಂಬಂಧ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮದವರೊಂದುಗೆ ಮಾತನಾಡಿದ ಶಾಸಕರು ಜಡ್ಕಲ್ ಮುದೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯು ಪ್ರಕರಣದಿಂದ ೮೪ ಮಂದಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚೇತರಿಸಿಕೊಂಡಿದ್ದು ಈಗ ೩೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯು ನಿಯಂತ್ರಣಕ್ಕೆ ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಡ್ಕಲ್ ಗ್ರಾ.ಪಂ.ಅಧ್ಯಕ್ಷೆ ಜಲಜಾಕ್ಷಿ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಬರ್ಟ್ರೆಬೆಲ್ಲೋ ಉಪಸ್ಥಿತರಿದ್ದರು.