ಮಂಗಳೂರು, ಮೇ 30 (DaijiworldNews/DB): ಈಜಾಡುತ್ತಿದ್ದ ವೇಳೆ ಮೈಸೂರು ಮೂಲದ ಇಬ್ಬರು ಪಣಂಬೂರು ಬೀಚ್ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಮೈಸೂರು ಜಯನಗರ ನಿವಾಸಿಗಳಾದ ದಿವಾಕರ ಆರಾಧ್ಯ (45) ಮತ್ತು ನಿಂಗಪ್ಪ (60) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದಲ್ಲಿ ನಡೆಯುತ್ತಿದ್ದ ಹಲಸಿನ ಮೇಳದಲ್ಲಿ ಭಾಗವಹಿಸಲು ದಿವಾಕರ ಆರಾಧ್ಯ, ನಿಂಗಪ್ಪ, ಅವಿನಾಶ್ ಸೇರಿದಂತೆ ನಾಲ್ವರು ಮೈಸೂರಿನಿಂದ ಮಂಗಳೂರಿಗೆ ಬಂದಿದ್ದರು. ವಿಹಾರಕ್ಕೆಂದು ಸೋಮವಾರ ಬೆಳಗ್ಗೆ ಪಣಂಬೂರು ಕಡಲ ಕಿನಾರೆಗೆ ನಾಲ್ವರೂ ತೆರಳಿದ್ದು, ನೀರಿನಲ್ಲಿ ಈಜಾಡಿದ್ದಾರೆ. ಆದರೆ ಈ ವೇಳೆ ದಿವಾಕರ ಆರಾಧ್ಯ ಮತ್ತು ನಿಂಗಪ್ಪ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಕ್ಕಿ ನೀರು ಪಾಲಾಗಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.