ಮಂಗಳೂರು, ಮೇ 30 (DaijiworldNews/HR): ಮಳಲಿ ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಒಟ್ಟಾಗಿ ಇದ್ದಾರೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಹೊರಗಿನ ಎಸ್ಡಿಪಿಐ, ಕಾಂಗ್ರೆಸ್ ಮುಖಂಡರ ವಾತಾವರಣ ಕೆಡಿಸುವ ಹೇಳಿಕೆಗಳನ್ನು ನಿರ್ಲಕ್ಷಿಸಿ. ಶಾಂತಿಯನ್ನು ಎಲ್ಲರೂ ಕಾಪಾಡಿಕೊಂಡು ಬರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದ್ದಾರೆ.
ಮಳಲಿ ಮಸೀದಿ ಆಡಳಿತ ಸಮಿತಿ ಮುಖ್ಯಸ್ಥರು, ವಿಎಚ್ಪಿ, ಬಜರಂಗದಳ, ಹಿಂದೂ ಸಂಘಟನೆಗಳ ಮುಖಂಡರ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಈ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳದೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಎಸ್ಡಿಪಿಐ ಸಮಾವೇಶದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಮಾಡುತ್ತಿದೆ. ಎಲ್ಲರ ಸಹಕಾರವಿದ್ದರೆ ಮಾತುಕತೆಯಿಂದಲೇ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ ಎಂದರು.
ಇನ್ನು 400 ವರ್ಷಗಳಿಂದ ನಮಗೆ ಇದರ ಇತಿಹಾಸ ತಿಳಿದಿದ್ದು, ನಾವು ನಮ್ಮ ಧಾರ್ಮಿಕ ಆಚರಣೆ ಮಾಡಿ ಕೊಂಡು ಬರುತ್ತಿದ್ದೇವೆ. ಪಾರಂಪರಿಕವಾಗಿ ಬಂದ ಬಗ್ಗೆಯೂ ಹಿರಿಯರ ಮಾತಿನಂತೆ ದಾಖಲೆ ಇರಿಸಿ ಕೊಂಡಿದ್ದೇವೆ ಎಂದು ಮಸೀದಿ ಆಡಳಿತ ಸಮಿತಿಯ ಪ್ರಮುಖರು ಮಾಹಿತಿ ನೀಡಿದ್ದಾರೆ.
ವಿಎಚ್ಪಿ ಬಜರಂಗದಳ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ನಾವು ನಮ್ಮ ಧಾರ್ಮಿಕ ನಂಬಿಕೆಯಂತೆ ತಾಂಬೂಲ ಪ್ರಶ್ನೆ ಮಾಡಿದ್ದು, ಯಾವುದೇ ಕಾರಣಕ್ಕೂ ಇತರರ ಪ್ರಚೋದನೆಗೆ ಒಳಗಾಗಿ ಸಂಘರ್ಷಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. ಮಳಲಿಯ ಹಿಂದೂ, ಮುಸ್ಲಿಂ ಸಮುದಾಯ, ಆಡಳಿತ ಸಮಿತಿ ಸೌಹಾರ್ದಯುತವಾಗಿ ಬಾಳುತ್ತಿದ್ದಾರೆ ಎಂದು ಹೇಳಿದ್ದಾರೆ.