ಕಾರ್ಕಳ, ಮೇ 30 (DaijiworldNews/MS): ಪರಿಶ್ರಮದಿಂದ ಬದುಕು ಕಟ್ಟಿಕೊಂಡು ಸ್ವಾಭಿಮಾನದ ಜೀವನವನ್ನು ನಡೆಸುತ್ತಿರುವ ಮರಾಠಿ ಸಮುದಾಯದ ಏಳಿಗೆಗಾಗಿ ರಾಜ್ಯ ಬಿಜೆಪಿ ಸರಕಾರ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಸಮುದಾಯ ಭವನ ನಿರ್ಮಾಣಕ್ಕಾಗಿ ಲಭ್ಯವಿರುವ ಜಮೀನು ಗುರುತಿಸಿ ನಿವೇಶನ ಮಂಜೂರುಗೊಳಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ .ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ಭಾನುವಾರ ನಡೆದ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಅಭಿನಂದಿಸಿ ಮಾತನಾಡಿದರು.ತೀರಾ ಬಡತನದ ಕುಟುಂಬದಲ್ಲಿ ಜನಿಸಿದ ಮಹಾಲಿಂಗ ನಾಯ್ಕ್ ಹಗಲಿನಲ್ಲಿ ಕೂಲಿ ಮಾಡಿ ರಾತ್ರಿ ನೀರಿಗಾಗಿ ತಿಂಗಳುಗಟ್ಟಲೆ ಗುಡ್ಡ ಕೊರೆದು ಸತತ ಪರಿಶ್ರಮದ ಫಲವಾಗಿ ಬರಡು ಭೂಮಿಯಲ್ಲಿ ಕೃಷಿ ಮಾಡಿ ಯಶಸ್ಸು ಕಂಡುಕೊಂಡ ಅಸಾಮಾನ್ಯ ಸಾಧಕ ಎನಿಸಿಕೊಂಡಿದ್ದಾರೆ, ಎಲೆಮರೆಯ ಕಾಯಿಯಂತಿದ್ದ ಅಮೈ ಮಹಾಲಿಂಗ ನಾಯ್ಕ್ ಅವರ ಮಹಾನ್ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಗೌರವ ನೀಡಿರುವುದು ಸಮಸ್ತ ಮರಾಠಿ ಸಮುದಾಯಕ್ಕೆ ಸಿಕ್ಕ ಗೌರವವಾಗಿದೆ.ತನಗೆ ಪ್ರಶಸ್ತಿ ಸಿಗಬೇಕೆಂಬ ಗುರಿಯಿಂದ ಮಹಾಲಿಂಗ ನಾಯ್ಕ್ ಈ ಸಾಧನೆ ಮಾಡಿಲ್ಲ,ಬದಲಾಗಿ ಪರಿಶ್ರಮದ ಫಲವಾಗಿ ಪ್ರಶಸ್ತಿ ಒಲಿದುಬಂದಿದೆ. ಗ್ರಾಮೀಣ ಭಾಗದ ತೀರಾ ಬಡಕುಟುಂಬದ ಸಾಧಕನನ್ನು ಗುರುತಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಿರುವುದು ಶ್ಲಾಘನೀಯ ಹಾಗೂ ಇವರು ಉಳಿದ ಸಾಧಕರಿಗೂ ಮಾದರಿಯಾಗಿದ್ದಾರೆ ಎಂದರು.
ಕಾಯಕವೇ ಕೈಲಾಸ ಎನ್ನುವ ಮನೋಭಾವದಿಂದ ಪರಿಶ್ರಮ ಹಾಗೂ ಸ್ವಾಭಿಮಾನಿಗಳಾಗಿ ಜೀವನ ನಡೆಸುವ ಮರಾಠಿ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರಕಾರ ಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಶೆಟ್ಟಿ, ಕಾರ್ಕಳ ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕ್, ಮುಂಬಯಿ ಉದ್ಯಮಿ ಅಜೆಕಾರು ಕುರ್ಪಾಡಿ ಸುಧಾಕರ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಕಳ ಮತ್ತು ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಗಂಧಿ , ಕೋಶಾಧಿಕಾರಿ ಕೆ.ಪಿ ನಾಯ್ಕ್, ಸಂಘದ ಗೌರವಾಧ್ಯಕ್ಷ ಶೇಖರ್ ನಾಯ್ಕ್ ಮುದ್ರಾಡಿ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ನಾಯ್ಕ್ ಕಡ್ತಲ, ಸಂಘಟನಾ ಕಾರ್ಯದರ್ಶಿ ನಾಗೇಂದ್ರ ನಾಯ್ಕ್,ಪ್ರಮೀಳಾ ,ಯುವ ವೇದಿಕೆ ಅಧ್ಯಕ್ಷ ಪವನ್ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜಶ್ರೀ , ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ನಾಯ್ಕ್, ರಾಘವ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.ಶೇಖರ್ ಕಡ್ತಲ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯ್ಕ್ ವಂದಿಸಿದರು. ಪದ್ಮಾಕರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.