ಮಂಗಳೂರು, ಮೇ 29 (DaijiworldNews/DB): ಎಸ್ ಡಿಪಿಐ ಸಮಾವೇಶದ ವೇಳೆ ಪೊಲೀಸ್ ಸಿಬಂದಿಯನ್ನು ಅವಹೇಳನಕಾರಿಯಾಗಿ ನಿಂದಿಸಿ, ವಾಹನ ಹತ್ತಿಕ್ಕಲು ಯತ್ನಿಸಿದ ಅಪರಿಚಿತ ಆರೋಪಿಗಳ ವಿರುದ್ದ ಕಂಕನಾಡಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮೇ 27 ರಂದು ಕಣ್ಣೂರಿನ ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ ಮೈದಾನದಲ್ಲಿ ನಡೆದ ಎಸ್ ಡಿಪಿಐ ಸಮಾವೇಶದ ವೇಳೆ ನಗರದ ಕೊಡೆಕ್ಕಲ್ ಚೆಕ್ ಪೋಸ್ಟ್ ಬಳಿ ಕೆಟಿಎಂ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು, ಸ್ಕೂಟರ್ನಲ್ಲಿ ತೆರಳುತ್ತಿದ್ದ ಇಬ್ಬರು, ಕಾರು ಚಾಲಕ ಹಾಗೂ ಇತರರು ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿ ಘೋಷಣೆಗಳನ್ನು ಕೂಗಿರುವ ವೀಡಿಯೋ ವೈರಲ್ ಆಗಿತ್ತು. ನಿಂದಿಸಿದ ವ್ಯಕ್ತಿಗಳ ಪೈಕಿ ಓರ್ವ ಕೈಯಲ್ಲಿ ಎಸ್ಡಿಪಿಐ ಧ್ವಜ ಹಿಡಿದುಕೊಂಡಿದ್ದ. ಕಾರ್ಯಕ್ರಮದ ಬಂದೋಬಸ್ತ್ನಲ್ಲಿದ್ದ ಪೊಲೀಸ್ ಸಿಬಂದಿಗಳಿಗೆ ಪಡೀಲ್ ಕಡೆಯಿಂದ ಬಂದ ಆರೋಪಿಗಳು ಬ್ಯಾರಿ ಭಾಷೆಯಲ್ಲಿ ನಿಂದಿಸುತ್ತಾ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದಾರೆ. ಅದರೊಂದಿಗೆ ಕರ್ತವ್ಯನಿರತರಾಗಿದ್ದ ಪಿ.ಸಿ. ಸಂಗನಗೌಡ ಅವರ ಮೇಲೆ ವಾಹನ ಹತ್ತಿಸಲು ಮುಂದಾಗಿದ್ದಾರೆ. ಅವರು ಪಕ್ಕಕ್ಕೆ ಹಾರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಚಂದ್ರಶೇಖರ.ಬಿ ಅವರು ದೂರು ನೀಡಿದ್ದಾರೆ.
ಕರ್ತವ್ಯನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ನಿಂದಿಸಿ ಪೊಲೀಸರ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.