ಕಾಸರಗೋಡು, ಮೇ 29 (DaijiworldNews/HR): ಬದಿಯಡ್ಕ ಪೇಟೆಯಿಂದ ಹಾಡಹಗಲೇ ರಿಯಲ್ ಎಸ್ಟೇಟ್ ವ್ಯಾಪಾರಸ್ಥರೊಬ್ಬರನ್ನು ತಂಡವೊಂದು ಅಪಹರಿಸಿದ ಘಟನೆ ನಡೆದಿದ್ದು, ಪೊಲೀಸರು ಕಾರನ್ನು ಬೆನ್ನಟ್ಟಿ ಮೂವರು ಅಪಹರಣಕಾರರನ್ನು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ವ್ಯಾಪಾರ ಮಾಡುವ ಗೋಳಿಯಡ್ಕ ನಿವಾಸಿ ಮೊಯ್ದೀನ್ ಕುಂಞಿ (49) ಅಪಹರಣಕ್ಕೊಳಗಾದ ವ್ಯಕ್ತಿ.
ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದು, ಮೊಯ್ದೀನ್ ಅವರ ಬೆರಳುಗಳಿಗೆ ಇರಿದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಧಿತ ಆರೋಪಿಗಳನ್ನು ಚೆಂಗಳ 4ನೇ ಮೈಲಿ ನಿವಾಸಿಗಳಾದ ಶರೀಫ್ ಮತ್ತು ಅಬ್ದುಲ್ ಹಕೀಂ ಮತ್ತು ಚಟ್ಟಂಚಾಲ್ ನಿವಾಸಿ ನಿಜಾಮುದ್ದೀನ್ ಎಂದು ಗುರುತಿಸಲಾಗಿದೆ. ಅಪರಾಧಕ್ಕೆ ಬಳಸಿದ್ದ ಮಾರುತಿ ಕಾರನ್ನು ಕೂಡ ಜಪ್ತಿ ಮಾಡಲಾಗಿದೆ.
ಮೇ 27ರಂದು ಸಂಜೆ 4 ಗಂಟೆ ಸುಮಾರಿಗೆ ಬದಿಯಡ್ಕ ಪೇಟೆಯ ರೆಸ್ಟೊರೆಂಟ್ವೊಂದರಲ್ಲಿ ಮೊಯ್ದೀನ್ ಚಹಾ ಕುಡಿಯುತ್ತಿದ್ದಾಗ ಹೊಟೇಲ್ನ ಹೊರಗೆ ಕಾದು ಕುಳಿತಿದ್ದ ತಂಡವೊಂದು ಆತನನ್ನು ಬಲವಂತವಾಗಿ ಕಾರಿನೊಳಗೆ ಎಳೆದೊಯ್ದಿದೆ. ಮೊಯ್ದೀನ್ನ ಕಿರುಚಾಟವನ್ನು ಕೇಳಿದ ಸ್ಥಳೀಯರು ಸಹಾಯಕ್ಕಾಗಿ ಧಾವಿಸಿದರು ಆದರೆ ಕಾರು ವೇಗವಾಗಿ ಚಲಿಸಿದ್ದು, ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಎಸ್ಐ ಪಿ.ಕೆ.ವಿನೋದ್ ಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಇಸ್ಮಾಯಿಲ್, ಜಯಪ್ರಕಾಶ್ ಮತ್ತು ಮನು ತಮ್ಮ ಜೀಪಿನಲ್ಲಿ ಕಾರನ್ನು ಹಿಂಬಾಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.