ಮಂಗಳೂರು, ಮೇ 29 (DaijiworldNews/DB): ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರು ಮೇ.29ರ ಭಾನುವಾರ ಬೆಳಗ್ಗೆ ಮಂಗಳೂರು ಸ್ಮಾಟ್೯ ಸಿಟಿ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಮಂಗಳಾ ಕ್ರೀಡಾಂಗಣ, ಸರ್ವಿಸ್ ಬಸ್ ನಿಲ್ದಾಣ, ಕ್ಲಾಕ್ ಟವರ್, ಎಮ್ಮೆಕೆರೆ ಈಜುಕೊಳ, ಮೋರ್ಗನ್ಸ್ಗೇಟ್, ಕಂಕನಾಡಿ ಮಾರುಕಟ್ಟೆ ಮುಂತಾದೆಡೆ ಸಚಿವರು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಯೋಜನೆಗಳು ಮುಕ್ತಾಯಗೊಂಡಿದ್ದರೆ, ಇನ್ನು ಕೆಲವು ಕಾಮಗಾರಿಗಳು ಶೇ. 50ರಷ್ಟು ಪೂರ್ಣಗೊಂಡಿವೆ. ಮಳೆಗಾಲದಲ್ಲಿ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿಕೊಂಡು ಕಾಮಗಾರಿಗಳನ್ನು ಮುಂದುವರಿಸಬೇಕು. ಡಿಸೆಂಬರ್, ಜನವರಿಯೊಳಗೆ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಜನೋಪಯೋಗಕ್ಕೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಂಗಳೂರು ಮಾತ್ರವಲ್ಲ, ಜಿಲ್ಲೆಗೂ ಉಪಯುಕ್ತವಾಗುವಂತೆ ಸ್ಮಾರ್ಟ್ಸ್ಸಿಟಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೆಲವನ್ನು ರಾಜ್ಯದ ಉಪಯೋಗವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತಿದೆ. ಕಾಮಗಾರಿಗಳು ಇನ್ನಷ್ಟು ವೇಗ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.
ಸ್ಮಾರ್ಟ್ಸ್ಸಿಟಿ ಯೋಜನೆಯಲ್ಲಿ ಬಹುಮುಖ್ಯವಾದ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣವಾಗುತ್ತಿದೆ. ರಾಜ್ಯದ ಕೆಲವೇ ಕೊಳಗಳಲ್ಲಿ ಇದೂ ಒಂದು. ಇದನ್ನು ಚೆನ್ನಾಗಿ ಬಳಕೆ ಮಾಡಿಕೊಂಡರೆ ರಾಜ್ಯ, ಅಂತಾರಾಜ್ಯ ಕ್ರೀಡಾಪಟುಗಳನ್ನು ಸೆಳೆಯಲು ಸಾಧ್ಯ. ಶೀಘ್ರ ಇದರ ಲೋಕಾರ್ಪಣೆ ನಡೆಯಲಿದೆ. ಕದ್ರಿ ಪಾರ್ಕ್ ಉನ್ನತೀಕರಣ ಶೇ. 90ರಷ್ಟು ಮುಕ್ತಾಯವಾಗಿದೆ. ಪಾರ್ಕಿಂಗ್ ವ್ಯವಸ್ಥೆ ಪರ್ಯಾಯವಾಗಿ ಕಲ್ಪಿಸಲು ಚರ್ಚೆ ನಡೆದಿದೆ. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದ ಸರ್ವಿಸ್ ಬಸ್ಸ್ಟ್ಯಾಂಡ್ಗೆ ಶಾಶ್ವತ ಕಾಯಕಲ್ಪ ಕೊಡುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸುನಿಲ್ಕುಮಾರ್ ವಿವರಿಸಿದರು.
ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಸ್ಮಾರ್ಟ್ ಸಿಟಿ ಎಂಡಿ ಮಹೇಂದ್ರ ಮಿಶ್ರ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರರು ಇದ್ದರು.