ಬಂಟ್ವಾಳ: ಮೇ 28 (DaijiworldNews/HR): ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗಳ ಆಶ್ರಮ ಶಾಲೆಯು ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿರುವ ಬಂಟ್ವಾಳ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್ ಅವರು ಶಾಲೆಯ ದುರಸ್ತಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ಮಾಡಿದ್ದಾರೆ.
ಮೇ 21ರಂದು ಶಾಲೆಗೆ ಭೇಟಿ ನೀಡಿದ ವೇಳೆ ಶಾಲೆಯ ಮೇಲ್ಛಾವಣಿಯ ಅವ್ಯವಸ್ಥೆಯಿಂದ ಸೋರುತ್ತಿದ್ದು, ನೀರು ಒಳಗೆ ಬಂದು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜತೆಗೆ ಗೋಡೆಗಳಿಗೆ ನೀರು ಬಂದು ಸಂಪೂರ್ಣ ಪಾಚಿ ಹಿಡಿದಿದೆ. ಒಳಭಾಗದಲ್ಲಿ ಸೀಲಿಂಗ್ನ ಗಾರೆಗಳು ಬಿದ್ದು ಕಬ್ಬಿಣಗಳು ಕಾಣುತ್ತಿವೆ. ಬಾಗಿಲುಗಳು ಸರಿಯಿಲ್ಲದೆ ಬೀಗ ಹಾಕಿದರೂ ಸ್ವಲ್ಪ ದೂಡಿದರೆ ಒಳಗೆ ಹೋಗುವ ಪರಿಸ್ಥಿತಿ ಇದೆ.
ಬಡವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿರ್ಮಾಣ ವಾಗಿದ್ದ ಹಳೆಯ ಕಾಲದ ಆಶ್ರಮ ಶಾಲೆಯ ದುರಸ್ತಿ ಮಾಡದಿದ್ದರೆ ಬಡವರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಕುತ್ತು ಬೀಳುವ ಸಂಭವವಿದೆ. ಕೂಡಲೇ ಮಕ್ಕಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಟ್ಟು, ಹೊಸ ಕಟ್ಟಡ ನಿರ್ಮಾಣಕ್ಕೆ ಹೆಜ್ಜೆ ಇಡುವಂತೆ ಅವರು ಮನವಿ ಮಾಡಿದ್ದಾರೆ.