ಕುಂದಾಪುರ,ಜ 09 (MSP): ಭಾರತ ಇವತ್ತು ಅಭಿವೃದ್ದಿ ಹೊಂದುತ್ತಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಕಾರ್ಮಿಕರು. ಕಾರ್ಮಿಕ ಹಿತವನ್ನು ಕಾಪಾಡಬೇಕಾದುದು ಸರ್ಕಾರಗಳ ಅಧ್ಯತೆಯಾಗುತ್ತದೆ. ಆದರೆ ನರೇಂದ್ರ ಮೋದಿ ಸರ್ಕಾರದ ಧೋರಣೆ, ಕಾರ್ಮಿಕ ವಿರೋಧಿ, ರೈತ ವಿರೋಧಿ ನೀತಿ ಆಘಾತಕಾರಿಯಾಗಿದೆ. ನಾಲ್ಕುವರೆ ವರ್ಷದ ಆಡಳಿತದಲ್ಲಿ ಇವರ ಸರ್ಕಾರದ ಸಾಧನೆಯೆಂದರೆ ನೋಟುಗಳ ಬಣ್ಣ ಬದಲಾಯಿಸಿದ್ದು ಮತ್ತು ಜಿಎಸ್ಟಿ ಮೂಲಕ ಬಡವರಿಗೇ ತೊಂದರೆ ಕೊಟ್ಟಿದ್ದು ಎಂದು ರಾಜಕೀಯ ಪ್ರಮುಖರಾದ ವಿಕಾಸ್ ಹೆಗ್ಡೆ ಹೇಳಿದರು.
ಅವರು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಡೆದೆ 10 ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ, 12 ಬೇಡಿಕೆಗಳ ಈಡೇರಿಕೆಗಾಗಿ ನಡೆದ ಮುಷ್ಕರದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಂಡವಾಳಶಾಹಿಗಳು ಈ ದೇಶದಲ್ಲಿ ಸಾಲ ಮಾಡಿ ವಿದೇಶಕ್ಕೆ ಫಲಾಯನಗೈದ ವಿಜಯ ಮಲ್ಯ, ಲಲಿತ್ ಮೋದಿ, ನೀರವ್ ಮೋದಿಯಂತಹವನ್ನು ಹಿಡಿದು ತರಲು ಇನ್ನೂ ಆಗಿಲ್ಲ. ನಮ್ಮ ದೇಶವನ್ನೇ ಕೊಳ್ಳೆ ಹೊಡೆದು ಬೇರೆ ದೇಶಕ್ಕೆ ಹೋಗಿ ಕುಳಿತಿರುವ ಕೋಟ್ಯಾಧಿಪತಿಗಳನ್ನು ಹಿಡಿದು ತರಲು ಆಗದ ಕೇಂದ್ರ ಸರ್ಕಾರ ಬಡ ಕಾರ್ಮಿಕರ ಮೇಲೆ ವಿರೋಧಿ ಧೋರಣೆ ತಾಳುತ್ತಿದೆ. ಇದಕ್ಕೆ ಕಾರ್ಮಿಕರು ತಕ್ಕ ಉತ್ತರ ಕೊಡುವ ದಿನ ದೂರವಿಲ್ಲ ಎಂದರು.
ಕಾರ್ಮಿಕ ಮುಖಂಡರಾದ ಎಚ್.ನರಸಿಂಹ ಮಾತನಾಡಿ, ಈ ದೇಶದ ಬೆನ್ನುಲುಬಾಗಿರುವ ಕಾರ್ಮಿಕರ ಅಭೀವೃದ್ದಿಗೆ ಹಣ ಮೀಸಲಿಡಲು ಸರ್ಕಾರ ಸಿದ್ಧವಿಲ್ಲ, ದೊಡ್ಡ ದೊಡ್ಡ ಬಂಡವಾಳಶಾಹಿಗಳನ್ನು ರಕ್ಷಿಸುವುದರಲ್ಲಿ ನಿರತವಾಗಿದೆ. 87 ವರ್ಷಗಳ ಇತಿಹಾಸವಿರುವ ವಿಜಯ ಬ್ಯಾಂಕನ್ನು ವಿಲೀನ ಮಾಡಲು ಮುಂದಾಗಿರುವುದು ದುರಾದೃಷ್ಟಕರ ಎಂದರು.
ಕಾರ್ಮಿಕ ಮುಖಂಡರಾದ ಸುರೇಶ ಕಲ್ಲಾಗರ ಮಾತನಾಡಿ, ಕಾರ್ಮಿಕರ ಬೇಡಿಕೆಯ ಬಗ್ಗೆ 4 ತಿಂಗಳ ಹಿಂದೆ ಮುಷ್ಕರ ನಡೆಸಿ ಬೇಡಿಕೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಸೌಜನ್ಯಕ್ಕಾದರೂ ಕಾರ್ಮಿಕ ಮುಖಂಡರನ್ನು ಮಾತುಕತೆಗೆ ಆಹ್ವಾನಿಸಿಲ್ಲ. ಹಾಗಾಗಿ ಪ್ರಮುಖ 12 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದೇವೆ. ಕೇಂದ್ರ ಸರ್ಕಾರವನ್ನು ಎಚ್ಚರಿಸುವುದು ನಮ್ಮ ಉದ್ದೇಶ. 44 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರಕ್ಕೆ ಈ ದೇಶದ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲವಾಗಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ರಾಜಕೀಯ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಜೆಸಿಟಿಯು ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್, ಸಿಐಟಿಯುನ ಮಹಾಬಲ ವಡೇರಹೋಬಳಿ, ರಾಜು ದೇವಾಡಿಗ, ಶ್ರೀಧರ್ ಶೇರುಗಾರ, ಚಂದ್ರಶೇಖರ ಖಾರ್ವಿ, ದೇವಕಿ ಸಣ್ಣಯ್ಯ, ವಿನೋದ್ ಕ್ರಾಸ್ತಾ, ರಾಜು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಗೂ ಮುಂಚೆ ಕುಂದಾಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.