ಉಡುಪಿ, ಮೇ 28 (DaijiworldNews/HR): ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ, ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಇಲ್ಲದ ಸಲ್ಲದ ಊಹಾಪೋಹ ಸೃಷ್ಟಿ ಮಾಡಿದ್ದಾರೆ. ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರರಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಚಿವ ಬಿ.ಸಿ.ನಾಗೇಶ್ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಹಿರಂಗ ಚರ್ಚೆ ಆಹ್ವಾನ ನೀಡಿದ್ದಾರೆ. ಖುಲ್ಲಂ ಖುಲ್ಲ ಚರ್ಚೆ ಮಾಡೋಣ ಎಂದು ಕರೆ ನೀಡಿದರೂ, ಚರ್ಚೆಯಿಂದ ಯಾಕೆ ಪಲಾಯನ ಮಾಡಿತ್ತಿದ್ದೀರಿ? ಅನುಮಾನ ಸೃಷ್ಟಿ ಮಾಡುವುದು, ಊಹಾಪೋಹ ಹಬ್ಬಿಸುವುದು ಇವರ ಉದ್ದೇಶವಾಗಿದೆ ಎಂದರು.
ಇನ್ನು ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು. ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ. ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾಯಿತು. ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರರಾಗಿದ್ದಾರೆ. ವಿಚಾರ ನಪುಂಸಕತೆ ಇಲ್ಲದಿದ್ದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ. ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಕ್ಕೆ ಸಾಕ್ಷ ತೋರಿಸಿ ಎಂದಿದ್ದಾರೆ.
ನಾರಾಯಣ ಗುರು ಪಠ್ಯವನ್ನು ಸಮಾಜದಿಂದ ಕನ್ನಡ ಪಾಠಕ್ಕೆ ವರ್ಗಾಯಿಸಲಾಗಿದೆ. ಏಳನೇ ತರಗತಿಯ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ. ದೇವನೂರು ಮಹಾದೇವ 2014, 2019ರಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ದೇವನೂರು ಕಾಂಗ್ರೆಸ್ ಪರ ನನ್ನ ವಿರುದ್ಧ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆ ಭಾಗದಲ್ಲಿ ಜನ ಏನು ತೀರ್ಪು ಕೊಟ್ಟಿದ್ದಾರೆ ಎಂದು ಗೊತ್ತಿದೆ. ದೇವನೂರು ಮಹಾದೇವ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಕುಸುಮಬಾಲೆ ಎಂಬ ಅದ್ಭುತ ಕೃತಿಯನ್ನು ಬರೆದವರು. ಕಾಂಗ್ರೆಸ್ ಪ್ರಚಾರ ಊಹಾಪೋಹಗಳನ್ನು ಬಿಟ್ಟು ಹಿಂದಿನ ಮಹಾದೇವರಾಗಿ ಮತ್ತೆ ಕೈಗೆತ್ತಿಕೊಂಡು ಒಂದು ಅದ್ಭುತ ಕೃತಿಯನ್ನು ರಚನೆ ಮಾಡಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಆರ್ಎಸ್ಎಸ್ ಮೂಲದ ಪ್ರಶ್ನೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಜೆ.ಡಿ.ಎಸ್ ನಲ್ಲಿದ್ದಾಗ ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದರು. ಈಗ ಅವರದ್ದೇ ಪಕ್ಷಕ್ಕೆ ಹೋಗಿ ಮಹಾತಾಯಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಹಾತಾಯಿ, ಮಹಾನಾಯಕಿ ಎಂದು ಒಪ್ಪಿಕೊಳ್ಳುವ ದಯನೀಯ ಸ್ಥಿತಿಯಲ್ಲಿದ್ದಾರೆ. ನೀವೂ ಆರ್ಎಸ್ಎಸ್ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಿ. ಕರ್ನಾಟಕದ ಜನತೆಗೆ ಇದನ್ನು ಮೊದಲು ತಿಳಿಸಿ, ಆಮೇಲೆ ಬೇರೆಯವರ ಬಗ್ಗೆ ಪ್ರಶ್ನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಡಗೀತೆಗೆ ರೋಹಿತ್ ಚಕ್ರತೀರ್ಥ ಅಪಮಾನ ಮಾಡಿದ್ದಾರೆ ಎಂಬ ಆರೋಪ ವಿಚಾರದ ಕುರಿತಾಗಿ ಮಾತನಾಡಿದ ಅವರು, ಈ ವಿಚಾರವನ್ನು ನಾನು ಕೂಡ ಗಮನಿಸಿದ್ದೇನೆ. ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಫೇಸ್ಬುಕ್ನಲ್ಲಿ ಹಾಕಿದ್ದರು. ಅದನ್ನು ಯಾರೋ ವ್ಯಂಗ್ಯ ಮಾಡಿದ್ದರು, ಅದು ತಪ್ಪು. ಅದನ್ನು ರೋಹಿತ್ ಚಕ್ರತೀರ್ಥ ರಚನೆ ಮಾಡಿದ್ದಲ್ಲ. ಸಿದ್ದರಾಮಯ್ಯ ಸಿಎಂ ಆಗಿರುವಾಗ ಈ ಕುರಿತು ಕೇಸುದಾಖಲಾಗಿದೆ ಬಿ ರಿಪೋರ್ಟ್ ಆಗಿದೆ. ಅನಗತ್ಯವಾಗಿ ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಕುವೆಂಪು ಮೈಸೂರಿನಲ್ಲಿ ನೆಲೆ ಇದ್ದಂತಹವರು. ನಾನು ಕುವೆಂಪು ಅಭಿಮಾನಿ ಅವರ ಮೇಲೆ ಅಪಾರ ಗೌರವವಿದೆ. ರೋಹಿತ್ ಚಕ್ರತೀರ್ಥ ಅವರನ್ನು ತುಳಿಯುವ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿದೆ. ವೈಯಕ್ತಿಕವಾಗಿ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಮಂಗಳೂರಿನಲ್ಲಿ ಮತ್ತೆ ನಡೆದ ಹಿಜಾಬ್ ವಿವಾದ ವಿಚಾರದ ಕುರಿತಾಗಿ ಮಾತನಾಡಿ, ಜಗತ್ತಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಇದೆ. ಸಮವಸ್ತ್ರ ಸಂಹಿತೆ ಜಾರಿ ಆಗಬೇಕು ಎಂಬ ಶಾಸಕ ರಘುಪತಿ ಭಟ್ ಹೋರಾಟ ಸರಿ ಇದೆ. ಸಮೂಹ ಸಂಹಿತೆ ಪಾಲಿಸಿ ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಕೋರ್ಟ್ ತೀರ್ಪಿಗೆ ಗೌರವ ಕೊಡಿ. ಕೋರ್ಟ್ ತೀರ್ಪನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಿ. ತಕರಾರು ಎತ್ತುವ ಕೋರ್ಟ್ ತೀರ್ಪು ಏನು ಎಂಬುದನ್ನು ತಿಳಿದುಕೊಳ್ಳಿ. ದೇಶ ಸಂವಿಧಾನಕ್ಕಿಂತ ನಮ್ಮ ಧರ್ಮವೇ ದೊಡ್ಡದು ಎಂದರೆ ಸಮಸ್ಯೆ ಇರುತ್ತದೆ ಎಮ್ದು ಹೇಳಿದ್ದಾರೆ.