ಮಂಗಳೂರು, ಮೇ 28 (DaijiworldNews/DB): ಮಳಲಿ ಮಸೀದಿಯ ಹಿಡಿ ಮಣ್ಣನ್ನೂ ನೀಡಲಾರೆವು. ಮಸೀದಿ ಬಿಟ್ಟು ಕೊಡುತ್ತಾರೆಂಬ ಕನಸು ಕಾಣಬೇಡಿ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ನೀಡಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಮಂಗಳೂರಿನ ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಬೃಹತ್ ಜನಾಧಿಕಾರ ಸಭೆಯಲ್ಲಿ ಮಾತನಾಡಿದ ಅಬ್ದುಲ್ ಮಜೀದ್, ಮಳಲಿ ವಿಷಯದಲ್ಲಿ ಮಾತನಾಡದಂತೆ ಡಿ.ಕೆ. ಶಿವಕುಮಾರ್ ಅವರು ಅವರ ಶಾಸಕರುಗಳಿಗೆ ಹೇಳಿದ್ದಾರೆ. ಕಾಂಗ್ರೆಸ್ ಮುಸ್ಲಿಮರ ಪರವಾಗಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ. ಮಳಲಿ ಮಸೀದಿ ಬಿಟ್ಟು ಕೊಡುತ್ತೇವೆಂಬ ಕನಸನ್ನು ಯಾರೂ ಕಾಣಬೇಡಿ. ಈ ದೇಶ ನಮ್ಮದು. ದೇಶಕ್ಕಾಗಿ ರಕ್ತ ಹರಿಸಿದ್ದೇವೆ ಎಂದಿದ್ದಾರೆ.
ಪೂಜಾ ಕಾಯ್ದೆ1991ರ ಪ್ರಕಾರ ತಾಂಬೂಲ ಪ್ರಶ್ನೆ ಎಂದು ಬರುವವರನ್ನು ಜೈಲಿಗೆ ಹಾಕಬೇಕು. ಇದು ಪೊಲೀಸರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
ಸಂಡೂರಿನ ಸುಗ್ಗುಲಮ್ಮ ದೇವಳವನ್ನು 2006ರಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೇರಿ ಧ್ವಂಸಗೊಳಿಸಿದ್ದರಲ್ಲ. ಸಂಘ ಪರಿವಾರದವರಿಗೆ ತಾಕತ್ತಿದ್ದರೆ ಈ ಬಗ್ಗೆ ತಾಂಬೂಲ ಪ್ರಶ್ನೆ ಇಟ್ಟು, ಜನಾರ್ದನ ರೆಡ್ಡಿ ಮನೆಗೆ ಮಾರ್ಚ್ ಮಾಡಲಿ ಎಂದವರು ಹೇಳಿದರು.
ಅಬ್ದುಲ್ ಮಜೀದ್ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಗಲಭೆ, ಪ್ರಚೋದನೆಗೆ ಕುಮ್ಮಕ್ಕು ನೀಡುವಂತಹ ಹೇಳಿಕೆಗಳನ್ನು ನೀಡುವುದು ಖಂಡನೀಯ. ಹಲವು ಕಡೆಗಳಲ್ಲಿ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ನಾವು ಮತ್ತೆ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಬಾಬ್ರಿ ಮಸೀದಿ ಕೆಡವಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ತಾಂಬೂಲ ಪ್ರಶ್ನೆ ವಿಚಾರದಲ್ಲಿ ಮಾತನಾಡುವವರುಸರ್ವನಾಶವಾಗುತ್ತಾರೆ ಎಂದು ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.