ಕುಂದಾಪುರ, ಮೇ 28 (DaijiworldNews/DB): ಕಟ್ಟೆ ಭೋಜಣ್ಣ ಎಂದೇ ಖ್ಯಾತರಾಗಿದ್ದ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ (79) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರನ್ನು ಕುಂದಾಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಟ್ಟೆ ಭೋಜಣ್ಣ ಅವರು ಮೇ 26ರಂದು ಬೆಳಗ್ಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಅವರ ಮನೆಯಲ್ಲಿ ಪಿಸ್ತೂಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಗಣೇಶ್ ಶೆಟ್ಟಿ ಹಾಗೂ ಹಂಗಳೂರು ಇಸ್ಮಾಯಿಲ್ ಅವರು ಚಿನ್ನಾಭರಣದ ಹೆಸರಿನಲ್ಲಿ ಬಡ್ಡಿ ಆಸೆ ತೋರಿಸಿ 3.34 ಕೋಟಿ ರೂ. ನಗದು, 5 ಕೆಜಿ ಚಿನ್ನ ಪಡೆದುಕೊಂಡಿದ್ದರು. ಬ್ಯಾಂಕಿನಲ್ಲಿಇದರ ಬಡ್ಡಿಅಸಲು ಸೇರಿ 9 ಕೋಟಿ ರೂ.ಗಳಾಗಿದ್ದು, ಇಬ್ಬರೂ ಕೂಡಾ ಹಣ, ಒಡವೆ ನೀಡದೆ ಮೋಸ ಮಾಡಿದ್ದಾರೆ. ಹಲವು ಬಾರಿ ಇದನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗದ ಕಾರಣ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ಡೆತ್ನೋಟ್ನಲ್ಲಿ ಉಲ್ಲೇಖಿಸಿದ ಹೆಸರಿನ ಆಧಾರದ ಮೇಲೆ ಇದೀಗ ಗಣೇಶ್ ಶೆಟ್ಟಿಯ ಬಂಧನವಾಗಿದೆ. ಇನ್ನೊಬ್ಬ ಆರೋಪಿ ಹಂಗಳೂರು ಇಸ್ಮಾಯಿಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಯನ್ನು ಜೆಎಂಎಫ್ಸಿ ನ್ಯಾಯಾಧೀಶೆ ರೋಹಿಣಿ ಅವರ ನಿವಾಸದಲ್ಲಿ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉದ್ಯಮಿ ಕಟ್ಟೆ ಗೋಪಾಲಕೃಷ್ಣ ಅವರು ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರ ಆಧಾರದ ಮೇಲೆ ಮೊಳಹಳ್ಳಿ ಗಣೇಶ್ ಮತ್ತು ಇಸ್ಮಾಯಿಲ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡೆತ್ನೋಟ್ನಲ್ಲಿ ಉಲ್ಲೇಖಿತವಾಗಿರುವುದು ಬಿಟ್ಟರೆ ಬೇರೆ ದಾಖಲೆಗಳು ಈವರೆಗೆ ಸಿಕ್ಕಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಟ್ಟೆ ಭೋಜಣ್ಣ ಅವರ ಅಂತ್ಯಸಂಸ್ಕಾರವು ಶುಕ್ರವಾರ ಕುಂದಾಪುರದ ಚಿಕ್ಕನ್ಸಾಲ್ ರಸ್ತೆಯ ರುದ್ರಭೂಮಿಯಲ್ಲಿ ನಡೆಯಿತು. ವಿವಿಧ ಉದ್ಯಮಗಳನ್ನು ಮುನ್ನಡೆಸುತ್ತಿದ್ದ ಕಟ್ಟೆ ಭೋಜಣ್ಣ ಅವರು ಕೊರೊನಾ ಲಾಕ್ಡೌನ್ ನಂತರ ಬೆಂಗಳೂರಿನಲ್ಲಿದ್ದ ಹೊಟೇಲ್ ಉದ್ಯಮ, ವಸ್ತ್ರೋದ್ಯಮಗಳಲ್ಲಿ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.