ವೇಣೂರು, ಮೇ 28 (DaijiworldNews/MS): ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ಹಾರ ಬದಲಾಯಿಸುವ ವೇಳೆ ಕ್ಷುಲಕ ಕಾರಣಕ್ಕೆ ಮುರಿದುಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿಯಲ್ಲಿ ಮೇ 25ರಂದು ನಡೆದಿದೆ.
ಮದುವೆ ಶಾಸ್ತ್ರದ ವೇಳೆ ಹಾರ ಬದಲಿಸುವಾಗ ವರನ ಕೈ ಕಿವಿಗೆ ತಾಗಿತೆಂದು ವಧು ಹಾರವನ್ನೇ ಎಸೆದು ಮದುವೆ ನಿರಾಕರಿಸಿದ್ದಾಳೆ. ಮೂಡುಕೊಣಾಜೆಯ ಯುವತಿಗೆ ನಾರಾವಿಯ ಯುವಕನೊಂದಿಗೆ ಮದುವೆ ನಿಶ್ಚಯ ಆಗಿ ನಾರಾವಿ ಸಭಾ ಭವನವೊಂದರಲ್ಲಿ ಮೇ 25ಕ್ಕೆ ಮದುವೆ ನಿಗದಿಯಾಗಿತ್ತು. ಸುಮಾರು 500ಕ್ಕೂ ಹೆಚ್ಚು ಮಂದಿಗೆ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು.
ಮದುವೆ ಶಾಸ್ತ್ರ ನಡೆಯುತ್ತಿದ್ದಂತೆ ಅರ್ಚಕರು ಹಾರ ಬದಲಿಸುವಂತೆ ಸೂಚಿಸಿದ್ದಾರೆ. ಅದರಂತೆ ವರ ಹಾರವನ್ನು ವಧುವಿನ ಕುತ್ತಿಗೆಗೆ ಹಾಕುತ್ತಿದ್ದಂತೆ ವಧು ರೊಚ್ಚಿಗೆದ್ದಿದ್ದಾಳೆ. ವರ ಹಾರ ಹಾಕುವಾಗ ವಧುವಿನ ಕೊರಳಿಗೆ ಕೈ ತಾಗಿದೆಯೆಂದು ಸಿಟ್ಟಿಗೆದ್ದ ವಧು ಮಂಟಪದಿಂದ ಹೊರನಡೆಯಲು ಮುಂದಾಗುತ್ತಿದ್ದಂತೆ ಸಂಬಂಧಿಕರು ಸಮಾಧಾನಪಡಿಸಿದ್ದಾರೆ. ಆದರೆ ಘಟನೆಯಿಂದ ಅವಮಾನಕ್ಕೊಳಗಾದ ವರನ ಕಡೆಯವರು ಮದುವೆಯನ್ನು ನಿರಾಕರಿಸಿದ್ದಾರೆ.
ಹೆಣ್ಣು ಗಂಡಿನ ಕಡೆಯವರು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭ ಆದಾಗ ವೇಣೂರು ಪೊಲೀಸರು ಆಗಮಿಸಿದ್ದಾರೆ. ಮಾತುಕತೆ ಸಂದರ್ಭ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ , ಈಗ ಮದುವೆಯಾಗುತ್ತಿರುವ ವರ ಬೇರೆಯೇ ಎಂದು ಅಚ್ಚರಿಯ ಮಾತು ಹೇಳಿದ್ದಾಳೆ .ಎರಡೂ ಕಡೆಯವರಿಗೆ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಟ್ಟರೂ ಸಂಬಂಧ ಬೆಸೆಯದೆ ಮದುವೆ ಮುರಿದುಬಿದ್ದಿದೆ. ಮಾತುಕತೆ ತಯಾರಾಗಿದ್ದ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಿರುವುದಾಗಿ ತಿಳಿದು ಬಂದಿದೆ.