ಬಂಟ್ವಾಳ, ಮೇ 28 (DaijiworldNews/MS): ವ್ಯಕ್ತಿ ಕಾಣೆಯಾಗುವುದು, ವಸ್ತುಗಳು ಕಾಣೆಯಾಗುವುದು ,ವಾಹನಗಳು ಕಾಣೆಯಾಗುವುದು ಇದೆಲ್ಲಾ ಮಾಮೂಲಿ ಸುದ್ದಿಯಾದರೆ, ಇಲ್ಲೊಂದು ವಿಚಿತ್ರ ಪ್ರಕರಣ ದಾಖಲಾಗಿದೆ. ನರಿಕೊಂಬು ಗ್ರಾಮದ ಬಾವಿ ಕಾಣೆ ಹುಡುಕಿ ಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಪಿಡಿಓ.
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಬಾವಿ ಕಾಣೆಯಾಗಿದ್ದು, ಇದನ್ನು ಹುಡುಕಿಕೊಡುವಂತೆ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನರಿಕೊಂಬು ಗ್ರಾಮದ ನೇಲ್ಯಡ್ಕ ನಿವಾಸಿ ದಯಾನಂದ ಪೂಜಾರಿ ಅವರು ಬಾವಿ ಮುಚ್ಚಿದ್ದಾರೆ ಎಂದು ಪೋಲೀಸ್ ಠಾಣೆಗೆ ಪಿಡಿಒ ದೂರು ನೀಡಿದ್ದಾರೆ.
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2012-13ನೇ ಸಾಲಿನಲ್ಲಿ ಸಾರ್ವಜನಿಕವಾಗಿ ತೆರೆದ ಬಾವಿಯನ್ನು ರೂ.73,305/- ಅನುದಾನದಲ್ಲಿ ಮಾಡಲಾಗಿತ್ತು. ಪ್ರಸ್ತುತ ತೆರೆದ ಸಾರ್ವಜನಿಕ ಬಾವಿಯನ್ನು ಸ್ಥಳೀಯ ದಯಾನಂದ ಪೂಜಾರಿರವರು ಕಾನೂನು ಬಾಹಿರವಾಗಿ ಸಂಪೂರ್ಣವಾಗಿ ಮುಚ್ಚಿ ಬಾವಿಯ ಸ್ಥಳವನ್ನು ಆಕ್ರಮಿಸಿಕೊಂಡಿರುತ್ತಾರೆ. ಆದ್ದರಿಂದ ಬಾವಿಯನ್ನು ಮುಚ್ಚಿ ಸರಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ದಯಾನಂದ ಪೂಜಾರಿಯವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.