ಮಂಗಳೂರು, ಮೇ 27 (DaijiworldNews/SM): ಸರ್ಕಾರ ನೀಡುವ ಸವಲತ್ತುಗಳನ್ನು ವಿಳಂಬಕ್ಕೆ ಆಸ್ಪದ ನೀಡದಂತೆ ಅರ್ಹರಿಗೆ ತಲುಪಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಾಕೀತು ಮಾಡಿದರು.
ಅವರು ಮೇ.27ರ ಶುಕ್ರವಾರ ಮಂಗಳೂರು ತಾಲೂಕಿನ ಗಂಜೀಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗರು ಗ್ರಾಮದ ವಿದ್ಯಾಭಾರತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ವಿವಿಧ ಇಲಾಖೆಗಳು ಹಾಗೂ ಮೊಗರು ಗ್ರಾಮ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಗ್ರಾಮಗಳ ಕಡೆ-ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಸಲ್ಲಿಕೆಯಾಗುವ ಅರ್ಜಿಗಳಗೆ ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯೊಳಗೆ ಬಂದಲ್ಲೀ ಕೂಡಲೇ ಪರಿಹಾರ ಕಲ್ಪಿಸಿಕೊಡಬೇಕು, ತಮ್ಮ ಹಂತದಲ್ಲಿ ಆಗದಿದ್ದ ಪಕ್ಷದಲ್ಲಿ ಮುಂದಿನ ಹಂತಕ್ಕೆ ತಕ್ಷಣ ಕಳುಹಿಸಿಕೊಡುವಂತೆ ತಿಳಿಸಿದರು.
ವಿವಿಧ ಪಿಂಚಣಿಗಳು, ಗೃಹ, ನಿವೇಶನ, ರಸ್ತೆ, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ, ಶಾಲಾ ಅಭಿವೃದ್ಧಿ, ಕಂದಾಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಗ್ರಾಮಸ್ಥರು ಸಲ್ಲಿಸಿರುವ ಅಹವಾಲುಗಳಲ್ಲಿ ಶೇ.50 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ. ಶೇ.25 ಅರ್ಜಿಗಳ ಬಗ್ಗೆ ಹೆಚ್ಚಿನ ಪರಿಶೀಲನೆ ಅಗತ್ಯವಿರುವ ದಿಸೆಯಲ್ಲಿ ಮುಂದಿನ ಕ್ರಮಕ್ಕೆ ಕಳುಹಿಸಲಾಗುತ್ತಿದೆ. ಉಳಿದಂತೆ ಶೇ.25 ಅರ್ಜಿಗಳಲ್ಲಿ ಕಾನೂನು ಸಮಸ್ಯೆ, ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡುವಂತಹದ್ದಾಗಿದ್ದು, ಈ ಬಗ್ಗೆ ಸಂಬಂಧಿಸಿದವರಿಗೆ ಮನವರಿಕೆ ಮಾಡಿಕೊಡಲಾಗಿದೆ, ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಲ್ಲೀ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು ಎಂದರು.