ಮಂಗಳೂರು, ಮೇ 27 (DaijiworldNews/SM): ವಿವಿ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿಕೆ ನೀಡಿದ್ದಾರೆ. ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ. 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡ್ತಿದಾರೆ ಎಂದಿದ್ದಾರೆ.
ನಿನ್ನೆ ಅವರು ಬಂದಾಗ ನಾವೇ ಅವರನ್ನು ಹಿಜಾಬ್ ತೆಗೆದು ಬನ್ನಿ ಅಂತ ಕಳಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರ್ತಿಲ್ಲ. ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಕೆವಲ 15 ವಿದ್ಯಾರ್ಥಿಗಳ ಸಮಸ್ಯೆ ಅಷ್ಟೇ ಎಂದಿದ್ದಾರೆ.
ಇನ್ನು ಪ್ರಭಾವಿ ಶಾಸಕರ ಒತ್ತಡ ಅಂತ ಏನೂ ಇಲ್ಲ, ಅದು ಮಕ್ಕಳ ಆರೋಪವಾಗಿದೆ. ನನಗೆ ಎಲ್ಲಾ ಶಾಸಕರು ಕರೆ ಮಾಡಿ ಜೋರು ಮಾಡ್ತಿದಾರೆ. ಆದರೆ ಯಾವ ಶಾಸಕರೂ ಒತ್ತಡ ಹಾಕಿಲ್ಲ, ಅವರಿಗೂ ಅವರದ್ದೇ ಆದ ಪ್ರತಿಷ್ಠೆ ಇದೆ ಎಂದುಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಡಾ.ಅನುಸೂಯ ರೈ ಸ್ಪಷ್ಟನೆ ನೀಡಿದ್ದಾರೆ.