ಉಡುಪಿ, ಮೇ 27 (DaijiworldNews/DB): ಕುಂದಾಪುರದ ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಆರೋಪಿ ದಂಪತಿಗಳಾದ ಅಜೀಜ್ ಮತ್ತು ಸಲ್ಮಾ ತಲೆಮರೆಸಿಕೊಂಡಿದ್ದಾರೆ. ಆದರೆ ಮಾಹಿತಿಗಳ ಪ್ರಕಾರ ಅವರಿಬ್ಬರು ಕಾಸರಗೋಡು ಕಡೆಗೆ ತೆರಳಿದ್ದಾರೆ ಎಂದರು.
ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿವೆ. ಆರೋಪಿ ಅಜೀಜ್ ಹಿಂದೆ ಯಾವುದೇ ಅಪರಾಧ ಎಸಗಿರುವ ಪ್ರಕರಣಗಳು ಲಭಿಸಿಲ್ಲ. ಆತನ ವಿರುದ್ದ ದೂರುಗಳು ದಾಖಲಾದ ಬಗ್ಗೆಯೂ ದಾಖಲೆಗಳು ಸಿಕ್ಕಿಲ್ಲ. ಆದರೆ ಸದ್ಯ ಯುಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಯುವತಿಯ ಮೊಬೈಲ್ನಲ್ಲಿ ಮೆಸೇಜ್ಗಳನ್ನು ಪರಿಶೀಲಿಸಿದಾಗ ಆಕೆ ಅಜೀಜ್ನೊಂದಿಗೆ ಪ್ರೀತಿಯಲ್ಲಿ ಬಿದ್ದಿರುವುದು ಸ್ಪಷ್ಟವಾಗಿದೆ. ಮತ್ತು ಅಜೀಜ್ ವಿರುದ್ದ ಆಕೆಯ ಸಹೋದರ ದೂರು ದಾಖಲಿಸಿರುವುದು ಗೊತ್ತಾಗಿದೆ. ಅಜೀಜ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಸಿದ್ದಲಿಂಗಪ್ಪ ತಿಳಿಸಿದರು.
ಅಜೀಜ್ನೊಂದಿಗೆ ಸಂಬಂಧದಲ್ಲಿರುವ ಬಗ್ಗೆ ಶಿಲ್ಪಾ ಬದುಕಿರುವಾಗ ಮತ್ತು ಆಸ್ಪತ್ರೆಯಲ್ಲಿರುವಾಗಲೂ ತಿಳಿಸಿಲ್ಲ. ಈಗಾಗಲೇ ಮತಾಂತರ ವಿಚಾರವಾಗಿ ಅಜೀಜ್ ಮತ್ತು ಆತನ ಪತ್ನಿ ಸಲ್ಮಾ ವಿರುದ್ದ ಕೇಸ್ ದಾಖಲಿಸಲಾಗಿದೆ. ಆದರೆ ಇದು ಮೌಖಿಕ ದೂರಾಗಿದ್ದು, ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದವರು ತಿಳಿಸಿದ್ದಾರೆ.