ಬಂಟ್ವಾಳ,ಜ 09 (MSP): ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾದ ಉಪಾಧ್ಯಕ್ಷ, ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ ಕುಂಬ್ರ ಇದರ ನಿರ್ದೇಶಕ ಶೈಖುನಾ ಅಲ್ಹಾಜಿ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್- ಮಿತ್ತಬೈಲ್ ಉಸ್ತಾದ್ (85) ಅವರು ಸೋಮವಾರ ರಾತ್ರಿ ಬಿ.ಸಿ.ರೋಡಿನ ಮಿತ್ತಬೈಲು ಸ್ವಗೃಹದಲ್ಲಿ ವಿಧಿವಶರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಆಧ್ಯಾತ್ಮಿಕ ಮುಖಂಡರಾಗಿರುವ ಜಬ್ಬಾರ್ ಉಸ್ತಾದ್ ಅವರು, ಲಕ್ಷ ದ್ವೀಪದ ಕಿಲ್ತಾನ್ನ ಖಾಝಿಯಾಗಿರುವ ಶೈಖ್ ಕೆ.ಪಿ. ಸಿರಾಜ್ ಕೋಯ ಹಾಗೂ ಕಣ್ಣಿಪುರದ ಮರ್ಹೂಮತ್ ಭೀಫಾತಿಮಾ ದಂಪತಿಯ ಮೂವರು ಮಕ್ಕಳಲ್ಲಿ ೨ನೆಯವರು. ಮಿತ್ತಬೈಲ್ ಉಸ್ತಾದ್ ಎಂದೇ ಖ್ಯಾತರಾಗಿರುವ ಇವರು, ಕಳೆದ 49 ವರ್ಷಗಳಿಂದ ಬಿ.ಸಿ.ರೋಡ್ ಮಿತ್ತಬೈಲ್ ಜುಮಾ ಮಸೀದಿಯಲ್ಲಿ ಮುದರ್ರಿಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮಿತ್ತಬೈಲ್ ಸಮೀಪದ ಶಾಂತಿಯಂಗಡಿ ಎಂಬಲ್ಲಿನ ಮನೆಯಲ್ಲಿ ತಮ್ಮ ಕುಟುಂಬ ಸಹಿತ ವಾಸವಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಉಸ್ತಾದರಿಗೆ ಚಿಕಿತ್ಸೆ ನೀಡಲಾಗಿತ್ತು. ಅನಾರೋಗ್ಯದ ಮಧ್ಯೆಯೂ ಧಾರ್ಮಿಕ ಕಾರ್ಯಕ್ರಮ, ಪ್ರವಾಸದಲ್ಲಿ ತೊಡಗಿಕೊಂಡಿದ್ದರು.
ಮಿತ್ತಬೈಲ್ನ ಮಸೀದಿಯಲ್ಲಿ ಅವರ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರ ಇಡಲಾಗಿದ್ದು, ಅವರ ಅಂತ್ಯಸಂಸ್ಕಾರ ಬುಧವಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ ಸಕೀನಾಬಿ, 10 ಮಂದಿ ಪುತ್ರರನ್ನು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇರಳದ ಪೊಣ್ಣಾನಿಯಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಮಾಡಿ, ಬಳಿಕ ತಮಿಳ್ನಾಡಿನ ವೆಲ್ಲೂರು ಬಾಖಿಯಾತ್ ಸ್ವಾಲಿಹಾತ್ನಲ್ಲಿ ಬಾಖವಿ ಪದವಿಯನ್ನು ಪಡೆದರು. ಅಲ್ಲಿಂದ ಉತ್ತರ ಭಾರತದ ದಯುಬಂದ್ನಲ್ಲಿ ಖಾಸಿಮಿ ಬಿರುದನ್ನು ಪಡೆದಿರುವ ಮಿತ್ತಬೈಲ್ ಉಸ್ತಾದ್ ಅವರು, ಖಗೋಳಶಾಸ್ತ್ರ, ಕರ್ಮಶಾಸ್ತ್ರ, ಹದೀಸ್, ತಫ್ಸೀರ್ಗಳಲ್ಲಿ ಅಗಾಧ ಜ್ಞಾನವನ್ನು ಕರಗತ ಮಾಡಿದ್ದಾರೆ.
ದ.ಕ. ಜಿಲ್ಲೆ ಸಹಿತ ರಾಜ್ಯದ ವಿವಿಧ ಕಡೆಗಳಲ್ಲಿನ ಮಸೀದಿಯ ಗೌರವಾಧ್ಯಕ್ಷರಾಗಿ ಹಾಗೂ ಜಿಲ್ಲೆಯ ಹಲವು ಸಂಘ ಸಂಸ್ಥೆ, ಧಾರ್ಮಿಕ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು, ಸಾವಿರಾರು ಶಿಷ್ಯಂದಿರನ್ನು ಹೊಂದಿದ್ದಾರೆ. ಮಿತ್ತಬೈಲ್ ಉಸ್ತಾದ್ ಅವರ ಬಳಿ ಜ್ಞಾನಾರ್ಜನೆಗೈದ ಸಾವಿರಾರು ವಿದ್ಯಾರ್ಥಿಗಳು ಹಲವು ಉನ್ನತ ಕಾಲೇಜುಗಳಲ್ಲಿ ಬಿರುದು ಪಡೆದು, ಕರ್ನಾಟಕ, ಕೇರಳ, ತಮಿಳುನಾಡು, ಲಕ್ಷದ್ವೀಪ ಹಾಗೂ ವಿವಿಧ ರಾಜ್ಯಗಳಲ್ಲಿ ಮುದರ್ರಿಸರಾಗಿ, ಖಾಝಿಯಾಗಿ, ಖತೀಬರಾಗಿ, ಮುಅಲ್ಲಿಮರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾತ್ರವಲ್ಲದೇ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಉನ್ನತ ಸ್ಥಾನಮಾನವನ್ನು ಅಲಂಕರಿಸಿದ್ದಾರೆ. ರಾಜ್ಯಕಂಡ ಅತ್ಯಂತ ಪ್ರಭಾವಿ ವಿದ್ವಾಂಸರಾಗಿರುವ ಇವರು, "ಉಸ್ತಾದುಲ್ ಅಸಾತೀದ್" ಎಂಬ ಹೆಸರಿನಲ್ಲಿ ಖ್ಯಾತರಾಗಿದ್ದಾರೆ.
ಮಂಗಳೂರಿನ ಖಾಝಿಯಾಗಿದ್ದ ಕೋಟಾ ಉಸ್ತಾದ್ ಅವರ ಸಹಾಯಕ ಖಾಝಿಯಾಗಿ ಸೇವೆ ಸಲ್ಲಿಸಿರುವ ಇವರು, ಲಕ್ಷ ದ್ವೀಪ ಕಿಲ್ತಾನ್ನಿಂದ ಬಂಟ್ವಾಳ ತಾಲೂಕಿನ ಮಿತ್ತಬೈಲಿಗೆ ಬಂದು ಇಂದಿಗೆ 49 ವರ್ಷ ಕಳೆಯಿತು. ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಮರ್ಹೂಂ ನಾಟಿಗಾ ವಿ. ಮೂಸಾ ಮುಸ್ಲಿಯಾರ್ ಅವರ ಕಲಿಕಾ ಸಮಯದ ಸಹಪಾಠಿಯೂ ಆಗಿದ್ದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಕೇರಳ ರಾಜ್ಯಾದ್ಯಂತ ಧಾರ್ಮಿಕ ಪ್ರವಚನ ನೀಡುತ್ತಾ, ಧಾರ್ಮಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರಿಗೆ, ಮಂಗಳೂರು ಖಾಝಿಯಾಗುವ ಅವಕಾಶ ಒದಗಿಬಂದರೂ, ನಯವಾಗಿ ನಿರಾಕರಿಸಿದ್ದರು. ಇಸ್ಲಾಮಿನ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಉಸ್ತಾದರು ಸರಳ ಜೀವನ ನಡೆಸಿ, ಆದರ್ಶ ಪ್ರಾಯರಾಗಿದ್ದರು. ದೇಶ, ವಿದೇಶದಾದ್ಯಂತ ಅಪಾರ ಶಿಷ್ಯ ವರ್ಗ ಹೊಂದಿರುವ ಉಸ್ತಾದರು, ಎಲ್ಲ ಧರ್ಮ, ಜಾತಿಯ ಬಾಂಧವರೊಂದಿಗೆ ಸಹೋದರತೆಯ ಭಾವನೆ ಬೆಳೆಸಿಕೊಂಡವರು.
ಕೈಕಂಬದಲ್ಲಿ ಜನಸ್ತೋಮ:
ಉಸ್ತಾದರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ರಾತ್ರಿಯಿಂದಲೇ ಅವರ ಶಿಷ್ಯರು, ಅಭಿಮಾನಿಗಳು ಬಿ.ಸಿ.ರೋಡಿನ ಕೈಕಂಬದಲ್ಲಿ ಜಮಾಯಿಸತೊಡಗಿದರು. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಯಿತು.
ಸಂತಾಪ:
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಎಸ್ಡಿಪಿಐ ರಾಜ್ಯಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ತಾಪಂ ಉಪಾಧ್ಯಕ್ಷ, ಮಾಜಿ ಸಚಿವ ರಮಾನಾಥ ರೈ, ಪುರಸಭಾ ಸದಸ್ಯರಾದ ಮುನೀಶ್ ಅಲಿ, ಸಿದ್ದೀಕ್ ಗುಡ್ಡೆಯಂಗಡಿ, ರಾಜ್ಯ ದಾರಿಮಿ ಉಲೆಮಾ ಒಕ್ಕೂಟದ ಅಧ್ಯಕ್ಷ ಎಸ್ಬಿ ದಾರಿಮಿ, ಅಬ್ದುಲ್ ಅಝೀಜ್ ದಾರಿಮಿ, ಹುಸೈನ್, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಅಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಟಿ.ಯು. ಇಸ್ಮಾಯಿಲ್ ಬಿ.ಸಿ.ರೋಡ್, ಎಸೆಸ್ಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್ಕೆಎಸ್ಸೆಸ್ಸೆಫ್ ಅನೀಸ್ ಕೌಸರಿ ತೀವ್ರ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ದ.ಕ.ಜಿಲ್ಲಾ ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್, ಸಂತಾಪ ಸೂಚಿಸಿದ್ದಾರೆ.