ಬಂಟ್ವಾಳ, ಮೇ 27 (DaijiworldNews/DB): ವಿಟ್ಲ ಸಮೀಪದ ಪಡಿಬಾಗಿಲು ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನ ನಡೆಸಿರುವ ವಿಚಾರವು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಈ ಸಂಬಂಧ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ ನಡೆಸಿದ್ದು, ವರದಿಯನ್ನು ಡಿಡಿಪಿಐಯವರಿಗೆ ನೀಡಿದ್ದಾರೆ. ವಿಚಾರಣೆ ನಡೆಸಿದ ಕಾರಣಕ್ಕಾಗಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ರಾಜೀನಾಮೆ ನೀಡಿದ್ದು, ಶಿಕ್ಷಣ ಇಲಾಖೆಯ ನಡೆಗೆ ಪೋಷಕರು ಮತ್ತು ಊರವರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಶಾಲೆಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಶಾಲಾ ಪ್ರಾರಂಭೋತ್ಸವದಂದು ಗಣಪತಿ ಹವನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಈ ವರ್ಷವೂ ಇದನ್ನು ಆಯೋಜಿಸಲಾಗಿತ್ತು. ಆದರೆ, ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ನೀಡದಿರುವ ಕುರಿತು ವಿವಾದ ಹಿನ್ನೆಲೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಹೋಮ, ಪೂಜೆ ನಡೆಸಿರುವುದೇಕೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಹಿಂದೂ ಧಾರ್ಮಿಕ ಆಚರಣೆ ಮಾಡಬಾರದು ಎಂಬುದಾಗಿ ಇಲಾಖೆಯಿಂದಲೂ ಯಾವುದೇ ಸೂಚನೆ ಇಲ್ಲ. ಸರ್ವ ಧರ್ಮದ ವಿದ್ಯಾರ್ಥಿಗಳು ಕಲಿಯುವ ಈ ಶಾಲೆಯಲ್ಲಿ ಎಲ್ಲರೂ ಅನ್ಯೋನಯವಾಗಿಯೇ ಇದ್ದು, ಕಳೆದ ಹದಿನೈದು ವರ್ಷಗಳಿಂದಲೂ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಇದನ್ನು ವಿವಾದ ಮಾಡುತ್ತಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ, ಪೋಷಕರು, ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ನಡುವೆ ಗಣಪತಿ ಹವನ ನಡೆಸಿದ ಹಿನ್ನೆಲೆಯಲ್ಲಿ ತಮ್ಮನ್ನು ವಿಚಾರಣೆಗೊಳಪಡಿಸಿದ ಕಾರಣ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ್ ರಾಜೀನಾಮೆ ನೀಡಿದ್ದಾರೆ. ಇದರಿಂದ ಗ್ರಾಮಸ್ಥರು ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆ ಮುಚ್ಚಿ ಹೋಗುವ ಸಂದರ್ಭದಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ಗ್ರಾಮಸ್ಥರು ಈ ಶಾಲೆಯನ್ನು ಉಳಿಸಿಕೊಂಡಿದ್ದಾರೆ. ಆಗ ಅಧಿಕಾರಿಗಳಿಗೆ ಶಾಲೆಯ ಬಗ್ಗೆ ಇಲ್ಲದ ಕಾಳಜಿ ಈಗ ಯಾಕೆ ಎಂದು ಪ್ರಶ್ನಿಸಿದ್ದಾರೆ.