ಕಾಸರಗೋಡು, ಜ 09 (MSP): ಕರ್ನಾಟಕ ಗದಗ ಮೂಲದ ಮಹಿಳೆಯ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ. ಬಂಧಿತನನ್ನು ಬೆಳಗಾವಿ ಕೆರೆಕೊಪ್ಪದ ಚಂದ್ರು ರಮೇಶ್ ಕಾಂಬ್ಳೆ ಯಾನೆ ಸುನಿಲ್ ( 39) ಎಂದು ಗುರುತಿಸಲಾಗಿದೆ. ಗದಗದ ಸರಸು ಯಾನೆ ಸರಸ್ವತಿ (35) ಎಂಬಾಕೆಯ ಕೊಲೆಗೆ ಸಂಬಂಧಪಟ್ಟಂತೆ ಚಂದ್ರು ರಮೇಶ್ ನನ್ನು ಬಂಧಿಸಲಾಗಿದೆ. ಮದ್ಯದ ಅಮಲಿನಲ್ಲಿ ಸರಸ್ವತಿ ಜೊತೆ ಜಗಳವಾಗಿದ್ದು , ಸರಸ್ವತಿಯ ತಲೆಯನ್ನು ಗೋಡೆಗೆ ಬಡಿದು ಕೊಲೆ ಮಾಡಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎ.ಎಸ್.ಪಿ ಡಿ . ಶಿಲ್ಪಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡಿನಲ್ಲಿ ಟೈಲ್ಸ್ ಹಾಸುವ ಕೆಲಸ ನಿರ್ವಹಿಸುತ್ತಿದ್ದ ಚಂದ್ರು ನಗರ ಹೊರವಲಯದ ವಿದ್ಯಾನಗರ ಚಾಲದಲ್ಲಿರುವ ಮನೆಯೊಂದರಲ್ಲಿ ಸರಸ್ವತಿ ಜೊತೆ ವಾಸವಾಗಿದ್ದನು.
ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಚಂದ್ರು ಎಂಬಾತನನ್ನು ತೀರ್ಥಹಳ್ಳಿಯಿಂದ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಡಿಸಂಬರ್ ೨೦ ರಂದು ಸರಸ್ವತಿ ವಿದ್ಯಾನಗರದಲ್ಲಿರುವ ಕ್ವಾಟರ್ಸ್ ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು . ಈಕೆ ಜೊತೆ ಇದ್ದ ಚಂದ್ರು ನಾಪತ್ತೆಯಾಗಿದ್ದನು . ಬಾಡಿಗೆ ಮನೆಗೆ ಬೀಗ ಹಾಕಿ ಕೆಲಸದ ಮಾಲಕನಿಗೆ ಕೀಲಿ ಕೈ ಯನ್ನು ನೀಡಿ ಎರಡು ದಿನದಲ್ಲಿ ಮರಳಿ ಬರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದನು . ನಾಲ್ಕು ದಿನ ಕಳೆದರೂ ಈತ ಮರಳಿ ಬರದಿದ್ದುರಿಂದ ಈತನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು . ಬಳಿಕ ಕ್ವಾಟ ರ್ಸ್ ಗೆ ಬಂದ ಮಾಲಕ ಕೆಲಸದ ಸಾಮಾಗ್ರಿಗಳನ್ನು ಕೊಂಡೊಯ್ಯಲು ಬಾಗಿಲು ತೆಗೆದು ನೋಡಿದಾಗ ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ವಿದ್ಯಾನಗರ ಮತ್ತು ಕಾಸರಗೋಡು ಪೊಲೀಸರು ಸ್ಥಕ್ಕಾಗಮಿಸಿ ತನಿಖೆ ನಡೆಸಿದ್ದರು . ಚಂದ್ರು ನಾಪತ್ತೆಯಾದ ಹಿನ್ನಲೆಯಲ್ಲಿ ಈತನ ಮಾಹಿತಿ ಯನ್ನು ಪೊಲೀಸರು ಕಲೆ ಹಾಕಿದ್ದರು. ಆರೋಪಿಯ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ಎ . ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು . ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲಾಗಿತ್ತು. ಕಳೆದ ಐದು ತಿಂಗಳಿನಿಂದ ಇವರು ಜೊತೆಯಾಗಿ ವಾಸವಾಗಿದ್ದರು. ಡಿ . 17 ರಂದು ರಾತ್ರಿ ಸರಸ್ವತಿಯನ್ನು ಕೊಲೆಗೈಯಲಾಗಿತ್ತು . 20 ರಂದು ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿತ್ತು . ತನಿಖಾ ತಂಡದಲ್ಲಿ ಕಾಸರಗೋಡು ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ವಿ . ವಿ ಮನೋಜ್ , ಸಬ್ ಇನ್ಸ್ ಪೆಕ್ಟರ್ ಅಜಿತ್ ಕುಮಾರ್ , ಎಎಸ್ಐ ಕೆ .ಎಂ ಜೋನ್ ,ಪ್ರದೀಪ್ ಕುಮಾರ್ , ನಾರಾಯಣನ್ ,ಲಕ್ಷ್ಮೀ ನಾರಾಯಣ , ರಾಜೇಶ್ , ಮನು ,ಲತೀಶ್ , ಶಿಜಿತ್ , ರತೀಶ್ , ಶ್ರೀಕಾಂತ್ , ಶಿವಕುಮಾರ್ ಮೊದಲಾದವರಿದ್ದರು.