ಕುಂದಾಪುರ, ಮೇ 27 (DaijiworldNews/HR): ಕಾಡುತ್ತಿರುವ ಅನಾರೋಗ್ಯವನ್ನು ಬದಿಗಿಟ್ಟು, ಮಲಗಿಕೊಂಡೇ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು 579 ಅಂಕ ಗಳಿಸುವ ಮೂಲಕ ರಾಜ್ಯದ ಶೈಕ್ಷಣಿಕ ವಲಯವೇ ಗಮನಿಸುವಂತಹ ಸಾಧನೆಯನ್ನು ವಂಡ್ಸೆ ಆತ್ರಾಡಿಯ ವಿಜಯ ಮಕ್ಕಳಕೂಟ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಆರ್. ಮಾಡಿದ್ದಾರೆ.
ಹಕ್ಲಾಡಿ ಗ್ರಾ.ಪಂ. ವ್ಯಾಪ್ತಿಯ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾ ದಂಪತಿಗಳ ಪುತ್ರಿ ಶ್ರಾವ್ಯಾ ಆರ್ ಈ ಸಾಧಕಿ.
7ನೇ ತರಗತಿ ವಿದ್ಯಾರ್ಥಿ ಸೆಮಿಸ್ಟರ್ ಬಳಿಕ ಶ್ರಾವ್ಯಾಳಿಗೆ ಅನಾರೋಗ್ಯ ಕಾಡಲಾರಂಭಿಸಿತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಕರುಳಿಗೆ ಸಂಬಂಧಪಟ್ಟ (ಬಿಐಡಿ ಕ್ರೋಮ್ಸ್) ಎನ್ನುವ ಸಮಸ್ಯೆ ಶ್ರಾವ್ಯಾಳನ್ನು ಹಿಂಡಿ ಹಿಪ್ಪೆ ಮಾಡಿತು. 35 ಕೆ.ಜಿ ದೇಹ ತೂಕ ಹೊಂದಿ ಆರೋಗ್ಯವಾಗಿದ್ದ ಹುಡುಗಿಯ ದೇಹತೂಕ ಗಣನೀಯವಾಗಿ ಇಳಿಯ ತೊಡಗಿತು. ಈಗ ಶ್ರಾವ್ಯಾ ಅಂದಾಜು 18 ಕೆ.ಜಿ ಇರಬಹುದು. ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯದಲ್ಲಿ ಇನ್ನೂ ತೂಕ ಕಡಿಮೆ ಇತ್ತು. ಆಗ ಆರು ತಿಂಗಳ ಕಾಲ ಶಿರಸಿಯ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆದರೂ ಕೂಡಾ ಉಳಿದ ದಿನಗಳಲ್ಲಿ ಮನೆಯಲ್ಲಿ ಬೆಡ್ ಮೇಲೆ ಮಲಗಿಕೊಂಡೇ ಓದಿ ಈ ಸಾಧನ ಮಾಡಿದ್ದಾರೆ.
7ನೇ ತರಗತಿಯ ಬಳಿಕ ಶ್ರಾವ್ಯಾಗೆ ನಿರಂತರ ತರಗತಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಶೆಟ್ಟಿಯವರು ಶ್ರಾವ್ಯಾಳ ಕಲಿಕಾಸಕ್ತಿ, ಆಕೆಯ ಆತ್ಮವಿಶ್ವಾಸವನ್ನು ಗಮನಿಸಿ ತರಗತಿಗೆ ಬರದೇ ಇದ್ದರೂ ಕೂಡಾ ನೋಟ್ಸ್ಗಳನ್ನು ಒದಗಿಸಿ, ಆಕೆಗೆ ನಿರ್ದಿಷ್ಟ ತರಗತಿ ನಡೆಸಿ ಎಸ್.ಎಸ್.ಎಲ್.ಸಿ ತನಕ ಸಿದ್ಧ ಪಡಿಸಿದರು. ಎಸ್.ಎಸ್.ಎಲ್.ಸಿಗೂ ಕೂಡಾ ನೋಟ್ಸ್, ಪಿಡಿಫ್ಗಳನ್ನು ಒದಗಿಸಿದರು. ಕೆಲವೊಂದು ದಿನ ಶ್ರಾವ್ಯಾಗಳನ್ನು ಶಾಲೆಗೆ ಕರೆದುಕೊಂಡು ಹೋಗಿ ಪ್ರತ್ಯೇಕವಾಗಿ ಆಕೆಗೆ ಪಾಠ ಮಾಡಲಾಯಿತು. ಮೂರು ವರ್ಷಗಳ ಕಾಲ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಲಾಯಿತು. ರಾತ್ರಿ 3 ಗಂಟೆಗೆ ಎದ್ದು ಓದುತ್ತಿದ್ದಳು. ಪರೀಕ್ಷಾ ಕೇಂದ್ರಕ್ಕೆ ಹೋಗುವಾಗಲೂ ಕೂಡಾ ಶಾಲಾ ಸಂಚಾಲಕ ಸುಭಾಶ್ಚಂದ್ರ ಶೆಟ್ಟ ತನ್ನ ವಾಹನದಲ್ಲಿಯೇ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಕರೆದೋಯ್ಯುತ್ತಿದ್ದರು. ಕೆಲವೊಂದು ಪರೀಕ್ಷೆ ಸಂದರ್ಭ ನಿತ್ರಾಣದಿಂದ ತುಂಬಾ ಸಮಸ್ಯೆಯಾಗುತ್ತಿತ್ತು. ಸಂಕಟವಾಗುತ್ತಿತ್ತು. ಆರು ಪರೀಕ್ಷೆಗಳನ್ನು ಬರೆಯುವುದು ನಿಜಕ್ಕೂ ಶ್ರಾವ್ಯಗೆ ಸಾಹಸವಾಗಿತ್ತು.
ಶಾವ್ಯ ಪ್ರಥಮ ಭಾಷೆ ಇಂಗ್ಲಿಷ್ನಲ್ಲಿ 116 ಅಂಕ, ಕನ್ನಡದಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 81, ವಿಜ್ಞಾನದಲ್ಲಿ 83, ಸಮಾಜ ವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ. ಕನ್ನಡ ಮತ್ತು ಸಮಾಜ ವಿಜ್ಞಾನದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ.
ಶ್ರಾವ್ಯಳಲ್ಲಿ ನಾಯಕತ್ವವನ್ನು ಪ್ರಾರಂಭದಲ್ಲಿ ಶಾಲೆಯಲ್ಲಿ ಗುರುತಿಸಲಾಗಿತ್ತು. ಆಗ ಹೊಸದಾಗಿ ಆರಂಭಗೊಂಡ ಶಾಲೆ ಆದ್ದರಿಂದ ಮೊದಲ ಬ್ಯಾಚ್ ವಿದ್ಯಾರ್ಥಿಗಳಾಗಿದ್ದರು ಇವರು. ಕೊಡಗಿನಲ್ಲಿ ಪ್ರಕೃತಿ ವಿಕೋಪದ ಸಮಯ ಕೊಡಗು ಸಂತ್ರಸ್ತರಪರವಾಗಿ ವಿದ್ಯಾರ್ಥಿ ಪೋಷಕರು, ಶಿಕ್ಷಣ ಪ್ರೇಮಿಗಳ ಮೂಲಕ 60 ಸಾವಿರ ಹಣ ಸಂಗ್ರಹಿಸುವಲ್ಲಿ ಶ್ರಾವ್ಯಾಳ ನಾಯಕತ್ವ ಎಲ್ಲಡೆಗೆ ಗಮನ ಸಳೆದಿತ್ತು.
ನಾನು ವೈದ್ಯೆಯಾಗಬೇಕು ಎನ್ನುವ ಕನಸು ಕಂಡಿದ್ದೆ. ಛಲ ಬಿಡುವುದಿಲ್ಲ, ಕೊನೆಗೆ ಇಂಜನಿಯರ್ ಆದರೂ ಆಗಿಯೇ ಆಗ್ತೇನೆ. ಅದಕ್ಕಾಗಿ ಪಿಸಿಎಂಬಿ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ನನ್ನ ಸ್ನೇಹಿತರ ಜೊತೆ ಕಾಲೇಜಿಗೆ ಹೋಗ್ತೇನೆ, ಆಗ ಈ ಏಕಾಂಗಿತನ ದೂರಾಗುತ್ತದೆ. ನಾನು ಸಾಧಿಸಿ ತೋರಿಸುತ್ತೇನೆ ಎನ್ನುತ್ತಾರೆ ಶ್ರಾವ್ಯಾ ಆರ್.
ನಿರಂತರ ತರಗತಿಗೆ ಬಂದು, ಟ್ಯೂಷನ್, ಕಠಿಣ ಅಭ್ಯಾಸ ಮಾಡಿದರೂ 580 ಅಂಕ ಪಡೆಯುವುದು ಕಷ್ಟ, ಅಂತಿರುವಾಗ ಕೇವಲ ಜೆರಾಕ್ಸ್ ಓದಿಕೊಂಡು, ಕಾಡುತ್ತಿರುವ ಅನಾರೋಗ್ಯದ ನಡುವೆ ಶ್ರಾವ್ಯಾಳ ಈ ಸಾಧನೆ ಮಾಡಿದ ಶ್ರಾವ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಿಸುವಂತಹದ್ದು. ಶ್ರಾವ್ಯಾಳ ಆತ್ಮವಿಶ್ವಾಸ, ಧೈರ್ಯ, ಛಲ ನಿಜಕ್ಕೂ ಭೇಷ್ ಎನ್ನಿಸುವಂತಹದ್ದು. ಶ್ರಾವ್ಯಾ ಈಗ ಪಿಯುಸಿಗೆ ಎಡ್ಮಿಷನ್ ಪಿಸಿಎಂಬಿಗೆ ಆಗಿದ್ದಾಳೆ.
ಶ್ರಾವ್ಯಾಳ ಮುಂದೆ ಭವಿಷ್ಯದ ಕನಸು ಇದೆ. ಇದಕ್ಕೆ ಸಹೃದಯಿಗಳ ಪ್ರೋತ್ಸಾಹ ಬೇಕಾಗಿದೆ. ಶ್ರಾವ್ಯಾ ಬಡ ಕುಟುಂಬದ ಮಗಳು. ತಂದೆ ಹೆಮ್ಮಾಡಿಯಲ್ಲಿ ಸಣ್ಣದೊಂದು ಪಾಸ್ಟ್ಪುಡ್ ಅಂಗಡಿ ಇಟ್ಟುಕೊಂಡಿದ್ದಾರೆ. ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನೂ ಚಿಕಿತ್ಸೆ ನೀಡಬೇಕು. ದೇಹ ತೂಕ ಮರಳಿ ಸರಿಯಾಗಬೇಕಿದೆ. ದೂರವಾಣಿ ಸಂಖ್ಯೆ 7022088015.