ಮಂಗಳೂರು, ಜ 09 (MSP): ರಾಜ್ಯ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಮಲ್ಪೆ ಟ್ರಾಲ್ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾರವಾರದಲ್ಲಿ ನೀಡಿದ ಅತಿರೇಕದ ಹೇಳಿಕೆಗೆ ತುಟಿ ಮೀರಿದ ಮಾತು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಖಂಡಿಸಿದ್ದಾರೆ. ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಬದಲು ಈ ರೀತಿ ಹೇಳಿಗೆ ನೀಡುವುದು ಸರಿಯಲ್ಲ ಮುಖ್ಯಮಂತ್ರಿ ಅವರಿಗೆ ಬುದ್ದಿ ಮಾತು ಹೇಳಬೇಕು ಎಂದು ಆಗ್ರಹಿಸಿದರು.
ಇದೇ ವಿಚಾರವಾಗಿ ಶಾಸಕ ಡಿ ವೇದವ್ಯಾಸ್ ಕಾಮತ್ ನಾವೇನು ಸಮುದ್ರಕ್ಕೆ ಇಳಿದು ಹುಡುಕಬೇಕಾ ಎಂದು ಕೇಳುವ ಮೂಲಕ ಸಚಿವರು ಮೀನುಗಾರರ ನೋವಿನ ಮೇಲೆ ಬರೆ ಎಳೆದಿದ್ದಾರೆ. ಮಾನವೀಯ ನೆಲೆಯಲ್ಲಿ ನೋಡಬೇಕಾದ ಪ್ರಕರಣವನ್ನು ರಾಜ್ಯ ಸರ್ಕಾರದ ಮಂತ್ರಿಯೊಬ್ಬರು ರಾಜಕೀಯ ದೃಷ್ಟಿಯಲ್ಲಿ ನೋಡಿದ್ದು ವಿಷಾದಕರ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ
ಇದಲ್ಲದೆ ಜೆಡಿಎಸ್ ರಾಜ್ಯ ಹಿಂದುಳಿದ ವರ್ಗದ ಉಪಾಧ್ಯಕ್ಷ ಹಾಗೂ ಆಲ್ ಇಂಡಿಯಾ ಮೋಗವೀರ ಆಸೋಸಿಯೇಶನ್ ಅಧ್ಯಕ್ಷ ಹರೀಶ್ ಎನ್.ಪುತ್ರನ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಮಲ್ಪೆ ಟ್ರಾಲ್ ಬೋಟ್ ನಾಪತ್ತೆ ಪ್ರಕರಣದ ಬಗ್ಗೆ ಸಚಿವರಲ್ಲಿ ಕೇಳಲಾದ ಪ್ರಶ್ನೆಗೆ ಅವರು ಮೀನುಗಾರರನ್ನು ಹುಡುಕಲು ನಾವೇನು ಸಮುದ್ರಕ್ಕೆ ಇಳಿಯಬೇಕೆ ? ಎಂದು ಅಸಂಬದ್ದವಾಗಿ ಉತ್ತರಿಸಿದರು.
ಈ ಬಗ್ಗೆ ಹೇಳಿಕೆ ನೀಡಿದ ಅ ಹರೀಶ್ ಪುತ್ರನ್ , ಮೀನುಗಾರಿಕೆಯ ಗಂಧ ಗಾಳಿ ಗೊತ್ತಿಲ್ಲದವರನ್ನು ಸಚಿವರನ್ನಾಗಿ ಮಾಡಿದರೆ ಇದೇ ಪರಿಸ್ಥಿತಿಯಾಗುತ್ತದೆ. ಅವರು ತಕ್ಷಣ ಸಮಸ್ತ ಮೀನುಗಾರರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.ತಪ್ಪಿದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.