ಉಡುಪಿ, ಮೇ 26 (DaijiworldNews/SM): ಆತ್ಮಹತ್ಯೆಗೆ ಯಾಕೆ ಉಡುಪಿಯನ್ನು ಆಯ್ಕೆ ಮಾಡುತ್ತಿದ್ದಾರೆ ಎಂಬ ಬಗ್ಗೆ ವಿಶ್ಲೇಷಣೆ ಮಾಡುವ ಅವಶ್ಯಕತೆ ಇದೆ. ಜಿಲ್ಲೆಗೆ ಯಾರು ಅಪರಿಚಿತರು, ಅನವಶ್ಯಕ ವ್ಯಕ್ತಿಗಳು ಪ್ರವೇಶ ಮಾಡುತ್ತಾರೆ ಎಂದು ನಿಗಾ ವಹಿಸಲು ವಾಹನ ತಪಾಸಣೆಗೆ ಚೆಕ್ ಪೋಸ್ಟ್ ಹೆಚ್ಚಳ ಮಾಡಬೇಕು', ಎಂದು ನೂತನ ಎಡಿಜಿಪಿ ಅಲೋಕ್ ಕುಮಾರ್ ಉಡುಪಿಯಲ್ಲಿ ಆತ್ಮಹತ್ಯೆ ಹೆಚ್ಚಳ ವಿಚಾರಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಗುರುವಾರ ಬನ್ನಂಜೆಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಸತತ ಮೂರು ಗಂಟೆಗಳ ಕಾಲ ಜಿಲ್ಲಾ ಮಟ್ಟದ ಪೊಲೀಸ್ ಇಲಾಖಾಧಿಕಾರಿಗಳ ನಡುವೆ ಜಿಲ್ಲೆಯ ಪ್ರಸ್ತುತ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ನಂತರ ಮಾತನಾಡಿದ ಅವರು, "ಕಳೆದವಾರವಷ್ಟೆ ಚಾರ್ಜ್ ತಗೊಂಡಿದ್ದೇನೆ. ರಾಜ್ಯದ ಬೇರೆ ಬೇರೆ ಭಾಗಗಳನ್ನು ನೋಡಬೇಕು. ಇದು ಮೂರನೇ ರೇಂಜ್. ಎಲ್ಲಾ ರೇಂಜ್ ಗಳನ್ನು ನೋಡಬೇಕಾಗುತ್ತದೆ. ಪರಿಸ್ಥಿತಿ ಯಾವ ರೀತಿ ಇದೆ ಎಂದು ಅರಿತುಕೊಳ್ಳಲು ಬಂದಿದ್ದೇವೆ ಎಂದರು.
ಕರಾವಳಿ ಹಿಜಾಬ್ ವಿವಾದ ಪ್ರಾರಂಭವಾಗುವುದಕ್ಕಿಂತ ಮೊದಲಿಂದಲೂ ಸೂಕ್ಷ್ಮ ಪ್ರದೇಶವಾಗಿತ್ತು. ಆಮೇಲೆ ಅಂಡರ್ ವರ್ಲ್ಡ್ ಸಂಪರ್ಕದಿಂದಾಗಿ ಗುರುತಿಸಿಕೊಂಡಿತ್ತು, ಅದು ಈಗ ಹೋಯ್ತು. ಬೇರೆ ಬೇರೆ ಸಮಯಕ್ಕೆ ಸರಿಯಾಗಿ ಸ್ವರೂಪದಲ್ಲಿ ಬದಲಾವಣೆ ಆಗುತ್ತಾ ಇರುತ್ತೆ ಎಂದರು.