ಕುಂದಾಪುರ, ಮೇ 26 (DaijiworldNews/SM): ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಗುತ್ತಿದ್ದು, ಭೋಜಣ್ಣ ಆತ್ಮಹತ್ಯೆಗೂ ಮುನ್ನ ಬರೆದಿದ್ದರೆನ್ನಲಾದ ಡೆತ್ ನೋಟ್ ಪತ್ತೆಯಾಗಿದೆ.
ಕಟ್ಟೆ ಭೋಜಣ್ಣ ಬರೆದಿದ್ದರೆನ್ನಲಾದ ಡೆತ್ ನೋಟ್ ನಲ್ಲಿ ಹಣ ವಂಚನೆ ಬಗ್ಗೆ ಉಲ್ಲೇಖಿಸಲಾಗಿದೆ. ಅಲ್ಲದೆ, ಇಬ್ಬರ ಹೆಸರು ಕೂಡ ಬರೆಯಲಾಗಿದೆ. ಕಚೇರಿಗೆ ಸಂಬಂಧಿಸಿದ ಲೆಟರ್ ಹೆಡ್ ನಲ್ಲಿ ಡೆತ್ ನೋಟ್ ಬರೆದಿದ್ದಾರೆ. ಹಣಕಾಸಿನಲ್ಲಿ ಅನ್ಯಾಯದ ಬಗ್ಗೆ ಅದರಲ್ಲಿ ಉಲ್ಲೇಖ ಮಾಡಿದ್ದಾರೆ.
ಡೆತ್ ನೋಟ್ ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ, ಇಸ್ಮಾಯಿಲ್ ಹಂಗಳೂರು ಹೆಸರು ಪ್ರಸ್ತಾಪಿಸಲಾಗಿದೆ. ಇವರಿಬ್ಬರು ಗೋಲ್ಡ್ ಜ್ಯುವೆಲ್ಲರಿ ಹೆಸರಿನಲ್ಲಿ ವಂಚಿಸಿದ್ದಾರೆ.
ಇವರಿಬ್ಬರು 3 ಕೋ. 34 ಲ. ರೂ. ನಗದು, 5 ಕೆ.ಜಿ ಚಿನ್ನ ಪಡೆದುಕೊಂಡಿದ್ದರು. 2012 ಫೆ. 3 ರಂದು ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಪಡೆದುಕೊಂಡಿದ್ದರು. ಆ ಬಳಿಕ ನಗ-ನಗದು, ಅದಕ್ಕೆ ಸಲ್ಲಬೇಕಾದ ಬಡ್ಡಿಯನ್ನೂ ವಾಪಾಸ್ ಮರಳಿಸಿರಲಿಲ್ಲ. ಈ ವಿಚಾರದಲ್ಲಿ ಹಲವು ಬಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಪಂಚಾಯತಿಕೆ ನಡೆಸಲಾಗಿತ್ತು. ಪಂಚಾಯತಿಕೆಯಲ್ಲಿ ಮರಳಿಸುವ ಬಗ್ಗೆ ವಾಯಿದೆ ಪಡೆದಿದ್ದರು. ಈವರೆಗೆ 9 ಕೋಟಿ ಮೊತ್ತದ ಹಣ, ಚಿನ್ನ ವಾಪಾಸ್ ನೀಡದೆ ಮೋಸ ಮಾಡಿದ್ದಾರೆ.
ಗಣೇಶ್ ಶೆಟ್ಟಿ ಮೊಳಹಳ್ಳಿ ಮನೆಗೆ ಪದೇ ಪದೇ ತೆರಳಿ ಸಾಕಾಗಿದೆ. ಅವರ ಮನೆಯಲ್ಲಿಯೇ ನನ್ನ ರಿವಾಲ್ವರ್ ನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಉಲ್ಲೇಖಿಸಲಾಗಿದೆ. ಗಣೇಶ್ ಶೆಟ್ಟಿ ಮೊಳಹಳ್ಳಿ, ಇಸ್ಮಾಯಿಲ್ ಅವರಿಂದ ಹಣ ರಿಕವರಿ ಮಾಡಿ, ಆ ಹಣವನ್ನು ತನ್ನ ಮನೆಯವರಿಗೆ ಕೊಡಿಸಿ ಎಂದು ಡೆತ್ ನೋಟ್ ನಲ್ಲಿ ಮನವಿ ಮಾಡಲಾಗಿದೆ.