ಮಂಗಳೂರು, ಮೇ 26 (DaijiworldNews/DB):ಡೀಸೆಲ್ ಬೆಲೆ ಏರಿಕೆ, ಕಡಿಮೆಯಾದ ಮೀನಿನ ಇಳುವರಿ ಮತ್ತು ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಮಂಗಳೂರು, ಮಲ್ಪೆ, ಗಂಗೊಳ್ಳಿಯಲ್ಲಿ ಮಳೆಗಾಲಕ್ಕೆ ಮುನ್ನವೇ ಸುಮಾರು ಶೇ. 90ರಷ್ಟು ಬೋಟ್ಗಳು ದಡದಲ್ಲಿ ಲಂಗರು ಹಾಕಿವೆ. ಇದರಿಂದಾಗಿ ಉಳಿದ ಶೇ.10 ಬೋಟ್ಗಳಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವವರಿಗೆ ಭರ್ಜರಿ ಮೀನು ಸಿಗುತ್ತಿದೆ.
ಕಳೆದ ವಾರದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಸದ್ಯ ಸಮುದ್ರ ಪ್ರಕ್ಷುಬ್ದತೆ ಹೆಚ್ಚಿದೆ. ಇದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದವರಿಗೆ ವರವಾಗಿದೆ. ಅಲ್ಲದೆ ಚಂಡಮಾರುತದಿಂದಾಗಿ ಆಳ ಸಮುದ್ರದಲ್ಲಿ ಮೀನಿನ ಲಭ್ಯತೆ ಹೆಚ್ಚಿದೆ. ಇದರೊಂದಿಗೆ, ಶೇ. 90ರಷ್ಟು ಬೋಟ್ಗಳು ಮೀನುಗಾರಿಕೆಗೆ ತೆರಳದೇ ಇರುವುದರಿಂದ ಉಳಿದವರಿಗೆ ಹೆಚ್ಚು ಮೀನು ಲಭ್ಯವಾಗುತ್ತಿದೆ. ಅಂದಾಜು1.5 ಟನ್ ಬೋಂಡಾಸ್ ಮೀನು ಪ್ರತಿ ಬೋಟ್ನಲ್ಲಿ ಸಿಗುತ್ತಿದ್ದು, ಕೆಜಿಗೆ 200 ರೂ.ಗಳಂತೆ ರಫ್ತುಮಾಡಲಾಗುತ್ತದೆ. ಚೆಮ್ಮನ್ ಮೀನುಗಳನ್ನು ಪ್ರತೀ ಕೆಜಿಗೆ 30 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ. ಮ್ಯಾಕ್ರೆಲ್ನ್ನು ಕೆಜಿಗೆ 80 ಹಾಗೂ150 ರೂ.ಗಳಂತೆ,ಕಿಂಗ್ಫಿಶ್ ಮೀನನ್ನು ಕೆಜಿಗೆ 800 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ.
ಮೀನು ವ್ಯಾಪಾರಿ ಬಾಶಾ ಅವರು ಹೇಳುವ ಪ್ರಕಾರ, ಈ ವರ್ಷದ ಕೊನೆಯ ಹಂತದ ಮೀನುಗಾರಿಕೆಯಲ್ಲಿ ಹೆಚ್ಚಿನ ಮೀನು ಲಭ್ಯವಾಗಿರುವುದರಿಂದ ಹೆಚ್ಚಿನ ಲಾಭ ತಂದು ಕೊಟ್ಟಿದೆ ಎನ್ನುತ್ತಾರೆ.
ಈ ವರ್ಷದ ಮೀನುಗಾರಿಕಾ ಋತು ಮೇ 31ಕ್ಕೆ ಕೊನೆಯಾಗಲಿದ್ದು, ಆರ್ಥಿಕ ತೊಂದರೆಯಿಂದಾಗಿ ಹಲವು ಬೋಟುಗಳು ಈ ತಿಂಗಳಾರಂಭದಲ್ಲೇ ದಡದಲ್ಲಿ ಲಂಗರು ಹಾಕಿದ್ದವು. ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಉತ್ತರ ಭಾರತದ ಕಾರ್ಮಿಕರು ಅವರ ಊರುಗಳಿಗೆ ಹಿಂತಿರುಗಿದ್ದಾರೆ. ಮುಂದಿನ ಮೀನುಗಾರಿಕಾ ಋತು ಆಗಸ್ಟ್ನಿಂದ ಆರಂಭವಾಗಲಿದೆ.
ದ.ಕ. ಜಿಲ್ಲೆಯಲ್ಲಿ 1,134 ಪರ್ಸಿನ್ ಬೋಟ್ಗಳು ಮತ್ತು ಟ್ರಾಲ್ ಬೋಟ್ಗಳಿವೆ. ಕ್ರಮವಾಗಿ1,396 ಮತ್ತು531 ಗಿಲ್ನೆಟ್ ಮತ್ತು ಸಾಂಪ್ರದಾಯಿಕ ಮೀನುಗಾರಿಕಾ ಬೋಟ್ಗಳಿವೆ. ಮಲ್ಪೆಯಲ್ಲಿ1723 ಪರ್ಸಿನ್ ಮತ್ತು ಟ್ರಾಲ್ಬೋಟ್ಗಳು ಹಾಗೂ1944 ಗಿಲ್ನೆಟ್, 861 ಸಾಂಪ್ರದಾಯಿಕ ಬೋಟುಗಳಿವೆ. ಗಂಗೊಳ್ಳಿಯಲ್ಲಿ 355 ಪರ್ಸಿನ್ ಮತ್ತು ಟ್ರಾಲ್ ಬೋಟ್ಗಳು, 2266 ಗಿಲ್ನೆಟ್ ಹಾಗೂ1124 ಸಾಂಪ್ರದಾಯಿಕ ಬೋಟುಗಳಿವೆ.