ಮಂಗಳೂರು, ಮೇ 26 (DaijiworldNews/MS): ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ಪ್ರಧಾನ ಪೀಠವು ಸುರತ್ಕಲ್ ಸೇರಿದಂತೆ ಹಲವೆಡೆ ಕಂಡುಬಂದಿರುವ ಸಮುದ್ರ ಮಾಲಿನ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಂಟಿ ಸಮಿತಿಯೊಂದನ್ನು ನೇಮಿಸಿದೆ. ಮಾಲಿನ್ಯದ ಇತರ ಕಾರಣಗಳನ್ನು ಹುಡುಕಲು ಈ ಸಮಿತಿಯನ್ನು ನಿಯೋಜಿಸಲಾಗಿದೆ.
ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ ಕೃಷಿಯ ಮೀನುಗಳು ಸಾವ್ನಪ್ಪಿರುವುದಾಗಿಯೂ ದೂರಿದ್ದರು. ಇದಲ್ಲದೆ ಸುರತ್ಕಲ್ನ ಗುಡ್ಡೆಕೊಪ್ಲ ಬಳಿ ತೇಲುವ ಜಿಡ್ಡು ಕಂಡುಬಂದಿತ್ತು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಎನ್ಜಿಟಿ ಸಮಿತಿ ರಚಿಸಿದೆ.
ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದ.ಕ. ಜಿಲ್ಲಾಧಿಕಾರಿ, ಕೋಸ್ಟ್ಗಾರ್ಡ್ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದವರು ಸಮಿತಿಯಲ್ಲಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತನಿಖೆಗೆ ನೋಡಲ್ ಏಜೆನ್ಸಿಯಾಗಿದೆ.
ಈ ಆದೇಶವನ್ನು ಎನ್ಜಿಟಿ ಅಧ್ಯಕ್ಷ ಆದರ್ಶ್ ಕುಮಾರ್ ಗೋಯಲ್, ಸದಸ್ಯರಾದ ಸುಧೀರ್ ಅಗರ್ ವಾಲ್, ತಜ್ಞ ಸದಸ್ಯ ಎ. ಸೆಂತಿಲ್ವೇಲ್ ಅವರನ್ನೊಳಗೊಂಡ ಪೀಠ ಹೊರಡಿಸಿದೆ. ಸುರತ್ಕಲ್ ಗುಡ್ಡಕೊಪ್ಲದ ಬಳಿ ಸಮುದ್ರ ಮಾಲಿನ್ಯದ ಕುರಿತು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರ ಹೇಳಿಕೆಯನ್ನು ಆಧರಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಎನ್ಜಿಟಿ ಈ ಆದೇಶ ನೀಡಿದೆ.
ಎರಡು ವಾರದೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆ ಅಧ್ಯಯನ ನಡೆಸಬೇಕು. ಎರಡು ತಿಂಗಳೊಳಗೆ ಎನ್ಜಿಟಿ ಗೆ ವರದಿ ಸಲ್ಲಿಸಬೇಕು ಎಂದು ಆದೇಶ ನೀಡಲಾಗಿದೆ.