ಮಂಗಳೂರು, ಜ 08(SM): ಸಾವಿರಾರು ಮಂದಿ ದಿನನಿತ್ಯ ಸಂಚರಿಸುವ ಸಾರ್ವಜನಿಕ ರಸ್ತೆ ಪಚ್ಚನಾಡಿಯಿಂದ ಬೊಂದೇಲ್ ಸಂಪರ್ಕಿಸುವ ಮಧ್ಯದ ರೈಲು ಹಳಿ ಬಳಿ ಕಾಮಗಾರಿ ಕೈಗೆತ್ತಿಕೊಂಡಿರುವುದನ್ನು ಸ್ಥಳೀಯರು ವಿರೋಧ ವ್ಯಕ್ತಪಡಿಸಿ ರೈಲು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಮಂಗಳವಾರ ನಡೆಯಿತು.
ಇಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೇ ಏಕಾಏಕಿ ಅಧಿಕಾರಿಗಳು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮುನ್ನ ಸ್ಥಳೀಯರಿಗೆ ಮಾಹಿತಿ ನೀಡಬೇಕಾಗಿತ್ತು. ಆದರೆ ಸ್ಥಳೀಯರು ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆಯಾಗಿ ಮಾತನಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ, ಕಾಂಗ್ರೆಸ್ನ ಮುಖಂಡ ಸ್ಟ್ಯಾನಿ ಅಳ್ವಾರಿಸ್ ಆಕ್ರೋಶ ವ್ಯಕ್ತಪಡಿಸಿದರು.
ತಾವು ಪೊಲೀಸರು, ಜಿಲ್ಲಾಧಿಕಾರಿಗಳೊಂದಿಗೆ ಅನುಮತಿ ಪಡೆದುಕೊಂಡು ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಂಡಿರುವುದಾಗಿ ರೈಲ್ವೇ ಚೀಫ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಾಂಡುರಂಗ ಪ್ರತಿಕ್ರಿಯೆ ನೀಡಿದರು.