ಉಡುಪಿ, ಜ 08(SM): ಅರಬ್ಬಿ ಸಮುದ್ರದಲ್ಲಿ ಡಿ.15ರಂದು ಕಾಣೆಯಾಗಿರುವ ಮಲ್ಪೆ ಬಂದರಿನ 7 ಮಂದಿ ಮೀನುಗಾರರ ಪತ್ತೆಗೆ ಸಹಕರಿಸುವಂತೆ ಅಖಿಲ ಭಾರತ ಮೀನುಗಾರರ ವೇದಿಕೆಯ ನೇತೃತ್ವದಲ್ಲಿ ಮಲ್ಪೆ ಮೀನುಗಾರರ ನಾಯಕರು ದೆಹಲಿಗೆ ತೆರಳಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರ ಆಯೋಜನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದಕ್ಕೆ ಈ ಮೀನುಗಾರರ ನಿಯೋಗ ಮಂಗಳವಾರ ದೆಹಲಿಗೆ ತೆರಳಿತ್ತು. ಆದರೆ ವಾರ್ವೆಯ ಪ್ರಧಾನಿ ದೆಹಲಿಗೆ ಆಗಮಿಸಿರುವುದರಿಂದ, ಮೋದಿ ಅವರ ಭೇಟಿ ಸಾಧ್ಯವಾಗಿಲ್ಲ, ಕೊನೆಗೆ ಪ್ರಧಾನಿ ಅವರ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿ ವಿಷಯವನ್ನು, ಅದರ ಗಂಭೀರತೆಯನ್ನು ಮನವರಿಕೆ ಮಾಡಿದ್ದೇವೆ, ಅವರು ಅದನ್ನು ಪ್ರಧಾನಿ ಅವರಿಗೆ ತಿಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ನಂತರ ಮೀನುಗಾರರ ನಿಯೋಗ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕಾಣೆಯಾದ ಮೀನುಗಾರರನ್ನು ತಕ್ಷಣ ಪತ್ತೆ ಮಾಡುವುದಕ್ಕೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಇದಕ್ಕೆ ಜೇಟ್ಲಿ ಅವರ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.