ಮಂಗಳೂರು,ಮೇ 26 (DaijiworldNews/MS): ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರದಲ್ಲಿ ಏರಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅದು ಸತ್ಯಕ್ಕೆ ದೂರವಾಗಿದೆ, ಜಿಲ್ಲೆಯಲ್ಲಿ ಭರಪೂರ ಮರಳು ಸಂಗ್ರಹವಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸ್ಪಷ್ಟಪಡಿಸಿದರು.
ಅವರು ಮೇ.25ರ ಬುಧವಾರ ನಗರದ ಪ್ರೆಸ್ ಕ್ಲಬ್ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಶಂಭೂರು ಹಾಗೂ ಮರವೂರಿನ ಡ್ಯಾಂನಲ್ಲಿ ಹೂಳೆತ್ತುವಿಕೆಯ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ. ಸಿಹಿನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ಮರಳು ಮಿತ್ರ ಆ್ಯಪ್ನಲ್ಲಿ ಅರ್ಜಿ ಸಲ್ಲಿಸಿ 7,000 ರೂ.ಗಳಿಗೆ 10 ಮೆಟ್ರಿಕ್ ಟನ್ ಮರಳು ಪಡೆಯಬಹುದು. ಜಿಎಸ್ಟಿ ಮತ್ತು ಸಾಗಾಟ ವೆಚ್ಚದೊಂದಿಗೆ ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳನ್ನು ಖರೀದಿಸಬಹುದು ಎಂದು ತಿಳಿಸಿದರು.
ಅದ್ಯಪಾಡಿ ಮತ್ತು ಶಂಭೂರು ಮರಳು ಸ್ಟಾಕ್ ಯಾರ್ಡ್ ನಲ್ಲಿ ಕ್ರಮವಾಗಿ 9,000 ಮತ್ತು 12,000 ಮೆಟ್ರಿಕ್ ಟನ್ ಲಭ್ಯವಿದೆ. ಸಂಗ್ರಹಿಸಿಡಲು ಜಾಗದ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಮರಳು ಜಿಲ್ಲೆಯ ನಿರ್ಮಾಣ ಕಾಮಗಾರಿಗೆ ಲಭ್ಯವಾಗಲಿದೆ. ಹೊರ ಜಿಲ್ಲೆಯಿಂದಲೂ ಮರಳಿಗೆ ಬೇಡಿಕೆ ಇದ್ದರೂ ಅನುಮತಿ ನೀಡಲಾಗಿಲ್ಲ. ಸದ್ಯ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಗೆ ಕ್ರಮ ವಹಿಸಲಾಗುವುದು. ಹಾಗಾಗಿ ಯಾರೂ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.