ಬಂಟ್ವಾಳ, ಮೇ 25 (DaijiworldNews/SM): ಬಿಜೆಪಿಯವರು ರಾಜಕೀಯದ ದೃಷ್ಟಿಯಿಂದ ಮಾತ್ರ ಧರ್ಮದ ವಿಚಾರ ಮಾತನಾಡುತ್ತಾರೆಂಬುದಕ್ಕೆ ಸುಳ್ಳಮಲೆ ನಿದರ್ಶನವಾಗಿದೆ. ಜಲಸನ್ನಿಧಿ ಹಾಗೂ ನಾಗಸಾನಿಧ್ಯ ಇರುವಲ್ಲಿ ಯಾವುದೇ ಸ್ಪೋಟಕಗಳನ್ನು ಬಳಸಬಾರದು. ಸಾನಿಧ್ಯ ಉಳಿಸುವ ನಿಟ್ಟಿನಲ್ಲಿ ಯಾವ ಅಷ್ಟಮಂಗಲದ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಬುಧವಾರ ಅನಂತಾಡಿ ಗೋಳಿಕಟ್ಟೆಯಲ್ಲಿ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಮಾಣಿ ಮತ್ತು ಅನಂತಾಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ "ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾತೀರ್ಥ ಉಳಿಸಿ" ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.
ಸುಳ್ಳಮಲೆಯಲ್ಲಿ ಬಿಟ್ಟ ವೀಳ್ಯದೇಲೆ ಅಡಿಕೆ ಮೇಲೆ ಬರುವ ತುಂಬೆದಕೋಡಿಯಲ್ಲಿ ಗಣಿಗಾರಿಕೆಯಿಂದಾಗಿ ಆ ಜಾಗ ಮುಚ್ಚಿಹೋಗುವ ಹಂತಕ್ಕೆ ತಲುಪಿದೆ. ಜಿಲ್ಲಾ ಪಂಚಾಯಿತಿಯ ರಸ್ತೆಯಲ್ಲಿ ನಿಗದಿಗಿಂತ ಅಧಿಕ ಭಾರವನ್ನು ಹೇರಿಕೊಂಡು ಲಾರಿಗಳು ಸಂಚರಿಸುತ್ತಿದೆ. ಕೊಡಾಜೆಯಲ್ಲಿರು ರೈಲ್ವೇ ಮೇಲ್ಸೇತುವೆಗೆ ಅಪಾಯ ಎದುರಾಗುವ ಸ್ಥಿತಿಗೆ ತಲುಪಿದೆ. ಸರ್ಕಾರ ಈ ಭಾಗದಲ್ಲಿ ನಡೆಯುವ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಮತ್ತು ಸಮಾಜಕ್ಕೆ ಸಮಸ್ಯೆಯಾಗದಂತೆ ನೋಡಬೇಕು ಎಂದು ಆಗ್ರಹಿಸಿದರು.
ಪುತ್ತೂರು ಯುವಕಾಂಗ್ರೇಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ. ಎಸ್. ಮಹಮ್ಮದ್, ಉಮಾನಾಥ ಶೆಟ್ಟಿ ಪೆರ್ನೆ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಿಯೂಸ್ ಎಲ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.