ಮಂಗಳೂರು, ಮೇ 25 (DaijiworldNews/DB): ಮೂರು ದಿನಗಳ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಶಿಪ್- 2022 ಪಣಂಬೂರ್ ಬೀಚ್ನಲ್ಲಿ ಮೇ 27ರಿಂದ 29ರ ತನಕ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಅವರು, ರಾಜ್ಯ ಪ್ರವಾಸೋದ್ಯಮ ಇಲಾಖೆ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಮಂತ್ರ ಸರ್ಫಿಂಗ್ ಸಂಸ್ಥೆಗಳು ಸರ್ಫಿಂಗ್ ಚಾಂಪಿಯನ್ಶಿಪ್ನ್ನು ಆಯೋಜನೆ ಮಾಡುತ್ತಿವೆ. ಪ್ರವಾಸೋದ್ಯಮ ಇಲಾಖೆಯು ಈ ಸ್ಪರ್ಧೆಗಾಗಿ 15 ಲಕ್ಷ ರೂ.ಗಳನ್ನು ನೀಡಿದೆ. ದೇಶಾದ್ಯಂತ ಸುಮಾರು 75ಕ್ಕೂ ಅಧಿಕ ಪ್ರಸಿದ್ದ ಸರ್ಫರ್ಗಳು ಭಾಗವಹಿಸಲಿದ್ದಾರೆ. ಈಗಾಗಲೇ 70 ಮಂದಿ ಭಾಗವಹಿಸುವುದನ್ನು ದೃಢೀಕರಿಸಿದ್ದಾರೆ ಎಂದರು.
ಸರ್ಫಿಂಗ್ ಮತ್ತು ಸ್ಟಾಂಡ್ ಅಪ್ ಪೆಡ್ಲಿಂಗ್ ಸ್ಪರ್ಧೆಯು ಪುರುಷರ ಮುಕ್ತ ಮತ್ತು ಮಹಿಳೆಯರ ಮುಕ್ತ ವಿಭಾಗದಲ್ಲಿ ಹಾಗೂ 16 ವರ್ಷ ಕೆಳಗಿನ ಬಾಲಕ ಮತ್ತು ಬಾಲಕಿಯರ ಮುಕ್ತ ವಿಭಾಗದಲ್ಲಿ ನಡೆಯಲಿದೆ. ಈಗಾಗಲೇ ಬೀಚ್ ಸುಂದರೀಕರಣ ಸೇರಿದಂತೆ ಅಗತ್ಯ ಸಿದ್ದತೆಗಳು ನಡೆಯುತ್ತಿವೆ. 2017ರಿಂದಲೇ ಸರ್ಫಿಂಗ್ ಜಿಲ್ಲೆಯಲ್ಲಿ ಜನಪ್ರಿಯ ಸ್ಪರ್ಧೆಯಾಗಿ ಪ್ರಸಿದ್ದಿ ಪಡೆದಿದೆ. ಸರ್ಫಿಂಗ್ಗೆ ಸರಿಹೊಂದುವ 40 ಕಿಮೀಗೂ ಹೆಚ್ಚು ಕರಾವಳಿ ಪ್ರದೇಶವನ್ನು ನಾವು ಹೊಂದಿದ್ದೇವೆ ಎಂದರು.
ಸರ್ಫಿಂಗ್ನ್ನು ಜಿಲ್ಲೆಯಲ್ಲಿ ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಹಲವು ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ಕೆಲಸ ಆಗುತ್ತಿದೆ. ಈಗಾಗಲೇ ಸಸಿಹಿತ್ಲುವಿನಲ್ಲಿ ಸಿಆರ್ಝಡ್ ನಿಯಮ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಿ ಸರ್ಫಿಂಗ್ ಜಂಗಲ್ ಲಾಡ್ಜ್ವೊಂದನ್ನು ನಿರ್ಮಿಸಲಾಗಿದೆ. ಸರ್ಫಿಂಗ್ ಶಾಲೆ ತೆರೆಯುವ ಉದ್ದೇಶವಿದೆ. ಅಲ್ಲದೆ, ನಿಸರ್ಗಸ್ನೇಹಿ ಪ್ರವಾಸೋದ್ಯಮವನ್ನು ಪ್ರಚುರಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಾರ್ವಜನಿಕರ ಬಳಕೆಗಾಗಿ ಮರಳು ಖರೀದಿ ಕುರಿತು ಪ್ರತಿಕ್ರಿಯಿಸಿದ ಅವರು, ಶಂಭೂರು ಮತ್ತು ಮರವೂರು ಪ್ರದೇಶಗಳಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲಕ್ಕೆ ಬಳಕೆಯಾಗುವಷ್ಟು ಮರಳು ಲಭ್ಯವಿದೆ. 10 ಯುನಿಟ್ ಮರಳು 7 ಸಾವಿರ ರೂ. ಗಳಿಗೆ ಲಭ್ಯವಿದೆ. ಜಿಎಸ್ಟಿ ಮತ್ತು ಸಾಗಾಟ ದರ ಬೇರೆಯೇ ಇರುತ್ತದೆ. ಮರಳು ಮಿತ್ರ ಆಪ್ ಮೂಲಕವೂ ಜನ ಮರಳನ್ನು ಮುಂಗಡವಾಗಿ ಬುಕ್ ಮಾಡಬಹುದು. ಕಾನೂನುಬಾಹಿರವಾಗಿ ಮಾರಾಟ ಮಾಡಲಾಗುವ ಮರಳನ್ನು ಜನ ಕೊಳ್ಳಬಾರದು. ಇಲ್ಲಿವರೆಗೆ 200 ಮೆಟ್ರಿಕ್ ಟನ್ ಮರಳಿನ ಲಭ್ಯತೆ ನಮ್ಮಲ್ಲಿದೆ ಎಂದು ಸ್ಪಷ್ಟಪಡಿಸಿದರು.