ಬಜಪೆ, ಮೇ 25 (DaijiworldNews/DB): ವ್ಯಕ್ತಿಯೋರ್ವರು ಮಸ್ಕತ್ಗೆ ಪ್ರಯಾಣಿಸಲು ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕಂದಾವರದಲ್ಲಿ ಐವರು ಆರೋಪಿಗಳು ಕಾರು ಅಡ್ಡಗಟ್ಟಿ ಹಲ್ಲೆ ಮಾಡಿ ಪಾಸ್ಪೋರ್ಟ್, ಹಣ, ಮೊಬೈಲ್ ಎಗರಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿಯ ನೌರೀಝ್ (30), ನೌಶಾದ್ (32) ಹಾಗೂ ಗಂಜಿಮಠ ಬಡಗುಳಿಪಾಡಿಯ ಅಕ್ಬರ್ (40) ಬಂಧಿತರು. ನಾರ್ಲಪದವಿನ ಅಬ್ದುಲ್ ರೆಹಮಾನ್ ಎಂಬವರು ಮೇ 23ರಂದು ಬೆಳಗ್ಗೆ 4.30ಕ್ಕೆ ಮಸ್ಕತ್ಗೆ ಪ್ರಯಾಣಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂದಾವರ ಸಮೀಪಿಸುತ್ತಿದ್ದಂತೆ ಸ್ವಿಫ್ಟ್ ಕಾರಿನಲ್ಲಿ ಬಂದ ಐವರು ಆರೋಪಿಗಳು ಅಬ್ದುಲ್ ರೆಹಮಾನ್ ಅವರ ಕಾರನ್ನು ಅಡ್ಡಗಟ್ಟಿ ಅವರನ್ನು ಎಳೆದು ಚೂರಿ ಮತ್ತು ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಪಾಸ್ಪೋರ್ಟ್, ಹಣ ಮತ್ತು ಮೊಬೈಲ್ನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ. ಘಟನೆ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಘಟನೆ ನಡೆದು ಹತ್ತು ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಹರಿರಾಂ ಶಂಕರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಎನ್. ಮಹೇಶ್ ಕುಮಾರ್ ಮತ್ತು ಬಜಪೆ ಠಾಣಾ ನಿರೀಕ್ಷಕ (ಪ್ರಭಾರ) ರಾಘವ ಪಡೀಲ್, ಪಿಎಸ್ಐಗಳಾದ ಪೂವಪ್ಪ, ಗುರುವಪ್ಪ, ಶಾಂತಿ, ಕಮಲಾ, ಎಎಸ್ಐಗಳಾದ ರಾಮ ಪೂಜಾರಿ ಮೇರಮಜಲು, ಸಂತೋಷ ಡಿ.ಕೆ. ಸುಳ್ಯ, ರಾಜೇಶ್, ಹೊನ್ನಪ್ಪ ಗೌಡ, ಪುರುಷೋತ್ತಮ್, ರೋಹಿತ್, ರಶೀದ್ ಶೇಖ್, ಮಂಜುನಾಥ, ಉಮೇಶ್ ಅವರು ಆರೋಪಿಗಳ ಪತ್ತೆಗಾಗಿ ಕಾರ್ಯ ನಿರ್ವಹಿಸಿದ್ದರು.