ಮಂಗಳೂರು, ಮೇ 25 (DaijiworldNews/DB): ಮಳಲಿ ಜುಮ್ಮಾ ಮಸೀದಿ ನವೀಕರಣದ ವೇಳೆ ದೇವಳ ಮಾದರಿ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಸೀದಿ ಸುತ್ತಮುತ್ತ ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ.
ಮಂಗಳೂರಿನ ಹೊರವಲಯದ ಮಳಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ನವೀಕರಣ ವೇಳೆ ದೇವಳ ಮಾದರಿಯ ರಚನೆಗಳಾದ ಕಂಬ, ವಿನ್ಯಾಸ ಇತ್ಯಾದಿ ಪತ್ತೆಯಾಗಿತ್ತು. ಈ ಕಾರಣಕ್ಕಾಗಿ ವಿಶ್ವಹಿಂದೂ ಪರಿಷತ್ ವಿವಾದಿತ ಮಸೀದಿ ಇತಿಹಾಸ ತಿಳಿಯಲು ಇಂದು ತಾಂಬೂಲ ಪ್ರಶ್ನೆಯನ್ನು ಹಮ್ಮಿಕೊಂಡಿದ್ದಾರೆ. ಕೇರಳದ ತಂತ್ರಿಗಳು ಇದಕ್ಕಾಗಿ ಆಗಮಿಸಿದ್ದು, ಬೆಳಗ್ಗೆ8 ಗಂಟೆಯಿಂದಲೇ ತಾಂಬೂಲ ಪ್ರಶ್ನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಯಾವುದೇ ರೀತಿಯ ಅಹಿತಕರ ವಾತಾವರಣ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಮಸೀದಿ ಸುತ್ತಮುತ್ತ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ದೈವೀಶಕ್ತಿ ಪತ್ತೆ ಕಾರ್ಯವು ಮಸೀದಿಯ 500 ಮೀಟರ್ ದೂರದಲ್ಲಿ ನಡೆಯುತ್ತದೆ. ಕೇರಳ ಮೂಲದ ಪೊದುವಾಲ್ರಿಂದ ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆಯಲಿದ್ದು, ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ಭಾಗವಹಿಸಲಿದ್ದಾರೆ.
ಎಪ್ರಿಲ್ 21ರಂದು ಈ ದರ್ಗಾವನ್ನು ನವೀಕರಣಗೊಳಿಸುವಾಗ ಮುಂಭಾಗವನ್ನು ಕೆಡಹುವ ವೇಳೆ ಇಲ್ಲಿ ಕಂಬ, ಬಾಗಿಲು, ಗುಡಿಯ ಶೈಲಿಯ ರಚನೆ ಪತ್ತೆಯಾಗಿತ್ತು. ಹೀಗಾಗಿ ಇದು ಹಿಂದೂ ಅಥವಾ ಜೈನ ದೇವಸ್ಥಾನ ಆಗಿರುವ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು.