ಉಡುಪಿ, ಮೇ 24 (DaijiworldNews/HR): ಬಹುಶಃ ಇದೇ ಪ್ರಥಮ ಬಾರಿಗೆ ಎಂಬಂತೆ ಇಂದು ನಗರ ಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯು ಹೆಚ್ಚು ಪ್ರಶ್ನೋತ್ತರ- ಚರ್ಚೆಯಿಲ್ಲದೆ ಕೇವಲ ಒಂದೂವರೆ ಗಂಟೆಯಲ್ಲಿ ಸಭೆ ಮುಗಿಯಿತು.
ಸಭೆಯಲ್ಲಿ ಪ್ರಶ್ನೋತ್ತರ ಅವಧಿ ವಿಜಯ್ ಕೊಡವೂರು ನಗರಸಭೆಯ ಎಸ್ಟಿಪಿ ಪ್ಲಾಂಟ್ ಮತ್ತು ಯುಜಿಡಿಯ ವ್ಯವಸ್ಥೆಯ ಪ್ರಸ್ತುತ ಸ್ಥಿತಿಯ ಬಗ್ಗೆ ಪ್ರಶ್ನಿಸಿದ್ದರು. ಕಳೆದ ನಾಲ್ಕು ತಿಂಗಳಿಂದ ನೀರು ಶುದ್ಧಿಯಾಗಲು ಎಸ್ಟಿಪಿ ಪ್ಲಾಂಟ್ ಗೆ ಬ್ಲೀಚಿಂಗ್ ಪೌಡರ್ ಹಾಕುತ್ತಿಲ್ಲ ಎಂದು ಆರೋಪಿಸಿದರು. ಇದು ಅಧಿಕಾರಗಳ ಕೆಲಸದಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಪರಿಸರ ಇಂಜಿನಿಯರ್ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. ಅಲ್ಲದೆ ಈ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತವಾಗುವಂತೆ ಸೂಚಿಸಿದರು.
ಅಲ್ಲದೆ ಇಂದ್ರಾಣಿ ಹೊಳೆಗೆ ಬಿದ್ದಿರುವ ಮರಗಳನ್ನು ಕೂಡಲೇ ತೆರವು ಮಾಡಿ ನೀರು ಹರಿಯಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಎಸ್ಟಿಪಿ ಪ್ಲಾಂಟ್ ನ ಬಗ್ಗೆ ವಿವರಣೆ ನೀಡಿದ ನಗರಸಭೆಯ ಅಧ್ಯಕ್ಷರಾದ ಸುಮಿತ್ರ ನಾಯಕ್, ಈಗಾಗಲೇ ಸರಕಾರ ಮಟ್ಟದಲ್ಲಿ ರೂ. 338 ಕೋಟಿಮೊತ್ತದ ಯುಜಿಡಿ ಮತ್ತು ಎಸ್ಟಿಪಿ ಕಾಮಗಾರಿ ಯೋಜನೆ ಅನುಮೋದನೆ ಸಿಕ್ಕಿದ್ದು, ಅನುದಾನ ಬಿಡುಗಡೆಯಾದ ಮೇಲೆ ಈ ವ್ಯವಸ್ಥೆ ಸುಧಾರಣೆಯಾಗುವ ಸಾಧ್ಯತೆ ಇದೆ ಎಂದರು
ಇನ್ನು ಮಳೆಗಾಲದಲ್ಲಿ ವಾರಾಹಿ ಕಾಮಗಾರಿಗೆ ಸಂಬಂಧ ಪಟ್ಟಂತೆ, ಅಲ್ಲಲ್ಲಿ ಬಿಟ್ಟಿರುವ ರಸ್ತೆ ರಿಪೇರಿ, ಗುಂಡಿ ಮುಚ್ಚುವುದು, ಪ್ಯಾಚ್ ವರ್ಕ್, ಇಂಟರ್ ಲಾಕ್ಸ್ ಇಡುವುಂತಹ ಕೆಲಸಗಳನ್ನು ಇಲಾಖೆ ಬಿಟ್ಟಿದ್ದು ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್ ನಲ್ಲಿ ಆಗುತ್ತಿರುವ ಸಮಸ್ಯೆಯನ್ನು ಮುಂದಿಟ್ಟು ಸದಸ್ಯರಾದ ರಮೇಶ ಕಾಂಚನ್, ಗಿರೀಶ್ ಅಂಚನ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯರುಗಳಾದ ಅಮೃತ ಕೃಷ್ಣಮೂರ್ತಿ ಆಚಾರ್ಯ, ಸೇರಿದಂತೆ ಕೆಲವು ಸದಸ್ಯರು ಮಳೆಗಾಲದ ಪೂರ್ವ ತಯಾರಿ ಅಧಿಕಾರಿಗಳಿಂದ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೂರಿದರು.
ಉಡುಪಿ ನಗರ ಭಾಗದಲ್ಲಿ ಹಳೆ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಕಟ್ಟಡ ಕೆಡವಲು ಟೆಂಡರ್ ಆಗಿದ್ದು ಸದ್ಯ ರೂ. 30 ಕೋಟಿ ವೆಚ್ಚದ 66000- 70000 ಚದರ ಅಡಿ ವಿಸ್ತೀರ್ಣ ಉಳ್ಳ ನಗರ ಸಭೆ ಕಟ್ಟಡ ಒಳಗೊಂಡಂತೆ ವಾಣಿಜ್ಯ ಕಟ್ಟಡ ನಿರ್ಮಾಣ ಗೊಳ್ಳಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಇನ್ನು ವಿಳಂಬ ಆಗುತ್ತಿರುವ ಪರ್ಕಳ ರಸ್ತೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, 'ಭೂ-ಸ್ವಾಧೀನ ಪಕ್ರಿಯೆಯಲ್ಲಿ ನಡೆದ ಅಧಿಕಾರಿಗಳ ಸಣ್ಣ ತಪ್ಪಿನಿಂದಾಗಿ ನಾವು ಜನಪ್ರತಿನಿಧಿಗಳು ಜನರ ಬಾಯಿಗೆ ಸಿಗುವಂತಾಗಿದೆ. ತಾಂತ್ರಿಕ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರೆಗೆ ಮಾತುಕತೆ ನಡೆಸಿದ್ದು 45 ದಿನದೊಳಗೆ ವರ್ಕ್ ಆರ್ಡರ್ ಕೊಡುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಅನಾರೋಗ್ಯ ನಿಮಿತ್ತ ರಜೆ ಇದ್ದುದರಿಂದ. ಸಿಎಂಸಿಯ ಎಡಬ್ಲ್ಯೂ ಯಶವಂತ ಪ್ರಭು ಸ್ಥಾನದಲ್ಲಿ ಕೂತು ಸಭೆಯನ್ನು ಆಲಿಸಿದರು, ಲಕ್ಷ್ಮಿ ಮಂಜುನಾಥ್, ಉಪಾಧ್ಯಕ್ಷರು ಉಪಸ್ಥಿತರಿದ್ದರು.