ಫರಂಗಿಪೇಟೆ, ಜ 08(SM): ಕಪ್ಪೆಚಿಪ್ಪು ಹೆಕ್ಕಲು ಹೋದ ಬಾಲಕನೋರ್ವ ನೀರುಪಾಲಾಗಿರುವ ಘಟನೆ ಫರಂಗಿಪೇಟೆಯ ನೇತ್ರಾವತಿ ನದಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಬಂಟ್ವಾಳದ ಅಮ್ಮೆಮ್ಮಾರು ಪುದು ಗ್ರಾಮ ನಿವಾಸಿ ಅಬ್ದುಲ್ ಸತ್ತಾರ್ ನದಿ ನೀರಲ್ಲಿ ನಾಪತ್ತೆಯಾಗಿರುವ ಯುವಕ.
ಭಾರತ ಬಂದ್ ಹಿನ್ನೆಲೆ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೊಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮಾರ್ ನಿವಾಸಿ ಬಶೀರ್ ಎಂಬವರ ಮಗ ಅಬ್ದುಲ್ ಸತ್ತಾರ್, ತನ್ನ ನಾಲ್ಕು ಮಂದಿ ಸ್ನೇಹಿತರೊಂದಿಗೆ ಕಪ್ಪೆ ಚಿಪ್ಪು ಸಂಗ್ರಹಿಸಲು ಫರಂಗಿಪೇಟೆ ಬದಿಯಿಂದ ನೇತ್ರಾವತಿ ನದಿಗೆ ಇಳಿದಿದ್ದ.
ಈ ವೇಳೆ ನದಿಗಿಳಿದವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳೀಯರು ನಾಲ್ವರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಆದರೆ, ಸತ್ತಾರ್ ನದಿ ನೀರಲ್ಲಿ ನಾಪತ್ತೆಯಾಗಿದ್ದಾನೆ.
ಸದ್ಯ ಆತನ ಪತ್ತೆಗೆ ಪೊಲೀಸರು ಹಾಗೂ ಸ್ಥಳೀಯರು ಶೋಧ ಕಾರ್ಯ ಮುಂದುವರೆಸಿದ್ದಾರೆ.