ಕಾರ್ಕಳ, ಮೇ 24 (DaijiworldNews/MS): ರಾಷ್ಟ್ರಮಟ್ಟದಲ್ಲಿ ಸುದ್ದಿಗ್ರಾಸವನ್ನುಂಟು ಮಾಡಿದ ಕಾರ್ಕಳ ಉತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪುರಸಭೆ ಕೈಗೆತ್ತಿಕೊಂಡ ಕಾಮಗಾರಿಗಳಿಗೆ ಬಿಲ್ಲು ಪಾವತಿಸುವಲ್ಲಿ ವಿಚಾರದಲ್ಲಿ ಪ್ರತಿಪಕ್ಷ ಸದಸ್ಯರೊಳಗೆ ಗೊಂದಲ ಏರ್ಪಟ್ಟಿರುವ ಘಟನಾವಳೀಯೂ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಪುರಸಭೆಯಲ್ಲಿ ಮಂಗಳವಾರ ಜರುಗಿದ್ದ ಸಾಮಾನ್ಯ ಸಭೆಯ ಕಲಾಪದಲ್ಲಿ ಮೀಟಿಂಗ್ ಅಜೆಂಡಾದಲ್ಲಿ ಕಾರ್ಕಳ ಉತ್ಸವಕ್ಕೆ ಸಂಬಂಧಿಸಿದ ವಿವರಣೆಯನ್ನು ನೀಡಲಾಗಿತ್ತು ಅಕ್ಷೇಪ ಸಲ್ಲಿಸಿದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯ ಸೋಮನಾಥ ಕೆಲಸ ನಿರ್ವಹಿಸಿದ ಗುತ್ತಿಗೆದಾರರು ಅವೈಜ್ಞಾನಿಕ ರೀತಿಯಲ್ಲಿ ಬಿಲ್ಲು ಮಾಡಿದ್ದಾರೆ. ಅವರಲ್ಲಿ 15 ಟನ್ ಸಾಮಾಥ್ಯ ಕಸ ಸಾಗಿಸುವ ಟಿಪ್ಪರ್ ವಾಹನ ಇಲ್ಲವೆಂದರು. ಬಹುತೇಕ ಟೆಂಡಡುಗಳು ಅವರೊಬ್ಬರೇ ವಹಿಸಿಕೊಂಡಿದ್ದಾರೆ. ಇದು ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಸದಸ್ಯೆ ಪ್ರತಿಮಾ ರಾಣೆ ಮಾತನಾಡಿ, ಕಾರ್ಕಳ ಉತ್ಸವದ ಸಂದರ್ಭ ಉತ್ಸವದ ಯಶಸ್ಸಿಗೆ ಸಹಮತ ಸೂಚಿಸಿದ್ದೇವೆ. ಈಗ ಆಕ್ಷೇಪಿಸುವಿದು ಸರಿಯಲ್ಲ. ಗುತ್ತಿಗೆದಾರರ ಬಿಲ್ಲುಗಳನ್ನು ಪರಿಶೀಲನೆ ನಡೆಸಿ ಪಾವತಿಸಿ ಎಂದರು.
ಹರೀಶ್ ಅವರು ಮಾತನಾಡಿ, ನಾವು ಕಾರ್ಕಳ ಉತ್ಸವಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದೇವೆ. ಬಿಲ್ಲುಗಳ ಪಾವತಿಗೆ ಸ್ಪೆಷಲ್ ಅನುದಾನ ತರಿಸಿಕೊಂಡು ಪಾವತಿಸುವಂತೆ ಅಭಿಪ್ರಾಯಿಸಿದರು. ಅಧ್ಯಕ್ಷೆ ಸುಮಕೇಶವ್ ಮಾತನಾಡಿ, ಎಲ್ಲರೂ ಸಹಕರಿಸಿದ ಪರಿಣಾಮ ಕಾರ್ಕಳ ಉತ್ಸವ ಯಶಸ್ವಿಯಾಗಿದೆ ಎಂದರು. ಬಳಿಕ ಬಿಲ್ಲು ಪಾವತಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಕ್ರೀಡಾಂಗಣವಾದ ಬಂಡಿಮಠ:
ಬಿಜೆಪಿ ಮಂತ್ರಿಮಂಡಳದಲ್ಲಿ ಗೃಹಖಾತೆ ಸಚಿವರಾಗಿದ್ದ ವಿಎಸ್ಆಚಾರ್ಯ ಅವರ ಮುತುವರ್ಜಿಯಿಂದ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಬಂಡೀಮಠ ಬಸ್ನಿಲ್ದಾಣ ಅಭಿವೃದ್ಧಿ ಕಂಡಿದೆ. ಸರ್ವ ಸೌಲಭ್ಯವನ್ನು ಒದಗಿಸಿದ ಬಸ್ ನಿಲ್ದಾಣ ನಿರುಪಯುಕ್ತವಾಗಿದೆ. ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಬಸ್ ನಿಲ್ದಾಣ ಉದ್ಘಾಟನೆಗೊಂಡಿದೆ.ತಾಲೂಕಿಗೆ ಕೋಟಿ ಕೋಟಿ ರೂ. ಅನುದಾನ ಹರಿದು ಬಂದ ಸಂದರ್ಭದಲ್ಲಿ ಈ ಬಸ್ ನಿಲ್ದಾಣ ಕೂಡಾ ಬಳಕೆಯಾಗಲಿ ಎಂದು ಅಶ್ಪಕ್ ಅಹ್ಮದ್ ತಿಳಿಸಿದರು.
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ!
ಕಾರ್ಕಳ ಪುರಸಭೆಯಲ್ಲಿ ಅನೇಕ ಹಳೆ ಬಿಲ್ಲುಗಳು ಪಾವತಿಯಾಗದೆ ಬಾಕಿ ಉಳಿದಿದೆ. ಸ್ಥಾಯಿ ಸಮಿತಿಯಲ್ಲಿ ನಿರ್ವಹಿಸಿದ ಕಾಮಗಾರಿ ಬಿಲ್ಲುಗಳು ಪಾವತಿಯಾಗದೆ ಗುತ್ತಿಗೆದಾರರು, ಪುರಸಭೆಯ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸೋಮನಾಥ ಆರೋಪಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಸಮರ್ಪಕವಾಗಿರದ ಕಾಮಗಾರಿ
ಪುರಸಭೆಯ 13ನೇ ವಾರ್ಡಿನಲ್ಲಿ 15ನೇ ಹಣಕಾಸು ಯೋಜನೆಯಡಿ ಚರಂಡಿ ನಿರ್ಮಾಣ ಮಾಡಿದ್ದು, 2.68 ಲಕ್ಷ ರೂ. ವ್ಯಯಿಸಲಾಗಿದೆ. ಆದರೆ ಅಸಮರ್ಪಕ ಕಾಮಗಾರಿಯಿಂದ ನೀರು ಹರಿದುಹೋಗುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯ ಪ್ರದೀಪ್ ಮಾರಿಗುಡಿ ಆರೋಪಿಸಿದರು.
ಕುಡಿಯುವ ನೀರು ಕಡಿತಗೊಳಿಸಿದರೆ ಪರ್ಯಾಯ ವ್ಯವಸ್ಥೆ ಏನು?
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜನತೆ ನೀರಿನ ಬಿಲ್ಲು ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಸಂಪರ್ಕ ಕಡಿತ ಮಾಡಲಾಗಿದೆ. ಅದನ್ನು ಮರುಪರಿಶೀಲಿಸಿ ಅವರಿಗೆ ರಿಯಾಯಿತಿ ಒದಗಿಸುವ ಮೂಲಕ ಮಾನವೀಯತೆ ಮೆರೆಯಬೇಕು. ಮೂಲ ಸೌಕರ್ಯಗಳಲ್ಲಿ ಕುಡಿಯುವ ನೀರು ಒಂದಾಗಿದೆ. ಕಂತು ರೂಪದಲ್ಲಿ ಬಿಲ್ ಪಾವತಿಸಿಸುವುದಕ್ಕೆ ಅವಕಾಶ ನೀಡಭೇಕು ಎಂದು ಸದಸ್ಯ ಶುಭದ ರಾವ್ ಆಗ್ರಹಿಸಿದರು.
ಹವಾಲ್ದಾರಬೆಟ್ಟು ನಾಗೋಳಿಯಲ್ಲಿ ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಸೌಲಭ್ಯ ಒದಗಿಸುವಂತೆ ಸದಸ್ಯೆ ನಳಿನಿ ಆಚಾರ್ಯ ಮನವಿ ಮಾಡಿದರು.ಕಾಬೆಟ್ಟು ಭಾಗದಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಿಕೊಡುವಂತೆ ರೆಹಮತ್ ಎನ್.ಶೇಖ್ ತಿಳಿಸಿದರು.ಬೀದಿ ನಾಯಿಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಅಶ್ಪಕ್ ಅಹ್ಮದ್ ಮನವಿ ಮಾಡಿದರು. ಎಣ್ಣೆಹೊಳೆಯಿಂದ ನೀರು ಸರಬರಾಜು ಅಳವಡಿಸುವ ಕಾಮಗಾರಿಯಿಂದ ತೊಂದರೆಯಾಗಿದ್ದು, ಬಂಗ್ಲೆಗುಡ್ಡೆ ಬಳಿ ರಿಕ್ಷಾ ಬಿದ್ದು ಸಮಸ್ಯೆಯಾಗಿದೆ ಎಂದು ಪ್ರತಿಮ ರಾಣೆ ತಿಳಿಸಿದರು. ಬಂಗ್ಲೆಗುಡ್ಡೆ ಬಳಿ ನಿರ್ಮಿಸಿದ ಇ-ಟಾಯ್ಲೆಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದರು.ಪುರಸಭಾ ವ್ಯಾಪ್ತಿಗೆ ಸರಬರಾಜು ಮಾಡಲಾಗುತ್ತಿರುವ ಸಮಗ್ರ ಕುಡಿಯುವ ನೀರು ಕುಡಿಯಲು ಅಯೋಗ್ಯವಾಗಿದೆ ಎಂಬ ವರದಿ ಇಲಾಖೆಯಿಂದಲೇ ಬಂದಿದೆ. ಇದರ ಬಗ್ಗೆ ತುರ್ತು ಕ್ರಮಕೈಗೊಳ್ಳದೇ ಹೋದಲ್ಲಿ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂದು ಪ್ರತಿಪಕ್ಷ ಸದಸ್ಯ ಶುಭದರಾವ್ ಸಭೆಯ ಗಮನಕ್ಕೆ ತಂದರು.
ಪುರಸಭೆ ಅಧ್ಯಕ್ಷೆ ಸುಮಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.