ಉಡುಪಿ, ಮೇ 24 (DaijiworldNews/DB): ಎಲ್ಲೂರಿನಲ್ಲಿರುವ ತ್ಯಾಜ್ಯ ಘಟಕಕ್ಕೆ ಬೇರೆ ಗ್ರಾಮಗಳ ಕಸ ತಂದು ಸುರಿಯುತ್ತಿರುವ ಬಗ್ಗೆ ಗ್ರಾಮಸ್ಥರು ಮತ್ತು ಮಾಜಿ ಸಚಿವ ವಿನಯಕುಮಾರ್ ಸೊರಕೆ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು. ಆ ಮೂಲಕ ತಣ್ಣಗಾಗಿದ್ದ ಕಸದ ವಿವಾದ ಮತ್ತೆ ತಲೆ ಎತ್ತಿದೆ.
ಎಲ್ಲೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ಘಟಕಕ್ಕೆ ಉಚ್ಚಿಲ ಮತ್ತು ಪಡುಬಿದ್ರೆಯ ಹೆಚ್ಚುವರಿ ಕಸ ತಂದು ಸುರಿಯಲಾಗುತ್ತಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಕಾಪು ಪುರಸಭೆ ಹೊರತುಪಡಿಸಿ ಬೇರೆ ಗ್ರಾಮಗಳಿಂದ ಕಸತಂದು ಇಲ್ಲಿ ಸುರಿಯಬಾರದು ಎಂದು ಆಗ್ರಹಿಸಿರು. ಆದರೆ ಉಚ್ಚಿಲ ಮತ್ತು ಪಡುಬಿದ್ರೆಯ ಕಡೆಯಿಂದ ಕಸವನ್ನು ಇಲ್ಲೇ ತಂದು ವಿಲೇವಾರಿ ಮಾಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದ ಪರಿಣಾಮ ಸ್ಥಳದಲ್ಲಿ ಮಾತಿನ ಚಕಮಕಿ ಉಂಟಾಯಿತು. ಈ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಸ್ಥಳಿಯರು ಬೇರೆ ಭಾಗದ ಕಸ ಇಲ್ಲಿ ಹಾಕದಂತೆ ಈ ಹಿಂದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೆ ಪ್ರಸ್ತುತ ತಡೆಯಾಜ್ಞೆ ತೆರವಾಗಿರುವ ಹಿನ್ನೆಲೆಯಲ್ಲಿ ಮತ್ತೆ ವಿವಾದ ತಲೆ ಎತ್ತಿದೆ. ಮಾಜಿ ಸಚಿವ ಮತ್ತು ಹಾಲಿ ಶಾಸಕರ ನಡುವಿನ ಪ್ರತಿಷ್ಠೆಯ ವಿಚಾರವಾಗಿ ವಿವಾದ ಭುಗಿಲೆದ್ದಿದೆ.