ಮಂಗಳೂರು, ಮೇ 24 (DaijiworldNews/DB): ಮಳಲಿಪೇಟೆ ಮಸೀದಿಯಲ್ಲಿ ನವೀಕರಣ ವೇಳೆ ದೇವಳ ಮಾದರಿಯ ರಚನೆ ಕಂಡು ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೂ ಯಾವುದೇ ಕೆಲಸಕಾರ್ಯ ನಿರ್ವಹಿಸದಂತೆ ಈಗಾಗಲೇ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಕಾನೂನಿಗೆ ಬೆಲೆ ಕೊಟ್ಟು ಪ್ರತಿಯೊಬ್ಬರೂ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದ್ದಾರೆ.
ಮಳಲಿಪೇಟೆ ಜುಮ್ಮಾ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಮಂಗಳವಾರ ಈ ಸಂಬಂಧ ಸಭೆ ನಡೆಸಿದ ಅವರು, ಮಸೀದಿ ಪುನರುಜ್ಜೀವನ ಕಾರ್ಯದ ಸಂದರ್ಭದಲ್ಲಿ ಅಲ್ಲಿ ದೇವಳ ಮಾದರಿ ರಚನೆ ಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ವಿವಿಧ ಸಂಘಟನೆಗಳು ಹಲವು ರೀತಿಯ ಮನವಿಗಳನ್ನು ಮಾಡುತ್ತಿವೆ. ಆದರೆ ಸದ್ಯ ಈ ವಿಚಾರ ಕೋರ್ಟ್ ನಲ್ಲಿದೆ. ಅಲ್ಲದೆ, ಮುಂದಿನ ಆದೇಶದವರೆಗೆ ಯಾವುದೇ ಪುನರುಜ್ಜೀವನ ಅಥವಾ ಇತರ ಕೆಲಸ ಕಾರ್ಯಗಳನ್ನು ಮಸೀದಿಯಲ್ಲಿ ಮಾಡಬಾರದು ಎಂಬುದಾಗಿ ಕೋರ್ಟ್ ಆದೇಶ ನೀಡಿದೆ. ಕಾನೂನಿಗೆ ಗೌರವ ನೀಡಿ ಕೋರ್ಟ್ ಆದೇಶದಂತೆ ನಡೆದುಕೊಳ್ಳಲಾಗುವುದು. ಆದರೆ ಕಾನೂನಾತ್ಮಕ ಹೋರಾಟಗಳನ್ನು ನಡೆಸಲಾಗುವುದು ಎಂಬುದಾಗಿ ಮಸೀದಿ ಮುಖ್ಯಸ್ಥರು ಕೂಡಾ ಈಗಾಗಲೇ ಹೇಳಿದ್ದಾರೆ. ಹೀಗಿರುವಾಗ ಎಲ್ಲಾ ಸಂಘಟನೆಗಳು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಯಾವುದೇ ವಿಚಾರವನ್ನಾದರೂ ಕಾನೂನಾತ್ಮಕವಾಗಿಯೇ ಹೋರಾಟ ನಡೆಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ.
ಮಂಗಳೂರು ತಾಲೂಕಿನತೆಂಕ ಉಳಿಪಾಡಿ ಗ್ರಾಮದ ಬಳಿ ಇರುವ ಮಳಲಿಪೇಟೆ ಜುಮ್ಮಾ ಮಸೀದಿಯ ನವೀಕರಣ ಸಂದರ್ಭದಲ್ಲಿ ದೇವಳದ ಮಾದರಿ ರಚನೆ ಕಂಡು ಬಂದಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ಮುಂದಿನ ಆದೇಶದವರೆಗೆ ಯಾವುದೇ ನವೀಕರಣ ಕಾರ್ಯ ಮಾಡಬಾರದು ಎಂಬುದಾಗಿ ಮಂಗಳೂರಿನ ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿತ್ತು. ಬಳಿಕ ಮಸೀದಿ ಸುತ್ತಮುತ್ತಲು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಡಳಿತವು ಎಸಿ ಮತ್ತು ತಹಶೀಲ್ದಾರ್ ಅವರನ್ನು ನೇಮಕಮಾಡಿತ್ತು.