ಮಂಗಳೂರು, ಜ 08 (MSP): ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಪುರಭವನ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಹೂಮಾಲೆ ಹಾಕಿ ಬ್ಯಾಂಕ್ ಸ್ಥಾಪಕ ಎ.ಬಿ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
4000 ಕೋಟಿ ರೂ.ಗಳಿಗೂ ಅಧಿಕ ನಷ್ಟದಲ್ಲಿರುವ ಬ್ಯಾಂಕ್ ಜತೆ ಲಾಭದಲ್ಲಿರುವ ಬ್ಯಾಂಕ್ ವಿಲೀನಗೊಳಿಸುವುದು ಖಂಡನೀಯ ಎಂದ ಅವರು ಕರಾವಳಿಯ ಸಂಸದರಾದ ಶೋಭಾ ಕರಂದ್ಲಾಜೆ , ನಳಿನ್ ಕುಮಾರ್ ಕಟೀಲ್ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಈ ಮೂವರು ಆಪ್ತ ಸಮಾಲೋಚನೆ ಮಾಡಿ ಬ್ಯಾಂಕ್ ನ್ನು ಗುಜರಾತ್ ಮೂಲದ ಉಧ್ಯಮಿಗಳಿಗೆ ಒತ್ತೆ ಇಟ್ಟಿದ್ದಾರೆ ಎಂದು ಕಿಡಿಕಾರಿದರು.
ವಿಜಯ ಬ್ಯಾಂಕ್ ಕರಾವಳಿಯ ಹೆಮ್ಮೆಯ ಬ್ಯಾಂಕ್. ಜನಪರವಾಗಿ, ರೈತರಿಗಾಗಿ ಹುಟ್ಟಿಕೊಂಡ ಬ್ಯಾಂಕನ್ನು ವಿಲೀನಗೊಳಿಸಿ ಹೆಸರು ಬದಲಾಯಿಸುವುದು ಕರಾವಳಿಗೆ ಮಾಡುತ್ತಿರುವ ಅನ್ಯಾಯ ಎಂದು ದೂರಿದ ಅವರು ಪ್ರಧಾನಿ ಮೋದಿ ಒಬ್ಬ ಕಾರ್ಪೋರೇಟರ್ ರೀತಿಯ ವ್ಯಕ್ತಿ ಆಗಿದ್ದು, ಅವರು ವಿದೇಶಿ ಪ್ರವಾಸ ಹಾಗೂ ಟಿ.ವಿ ಶೋಗಳಲ್ಲಿ ಕಾಲಕಳೆಯುತ್ತಾರೆ. ದೇಶದ ಬಗ್ಗೆ ಕಾಳಜಿ ಇಲ್ಲದ ಅವರಿಗೆ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಿಂಚಿತ್ತು ಜ್ಞಾನವಿಲ್ಲ. ಅವರೊಂದಿಗಿರುವ ವಿತ್ತ ಸಚಿವ ಅರುಣ್ ಜೆಟ್ಲಿ ಅವರಾದರೂ ನಷ್ಟದಲ್ಲಿರುವ ಬ್ಯಾಂಕ್ ನೊಂದಿಗೆ ವಿಜಯ ಬ್ಯಾಂಕ್ ವಿಲೀನ ಮಾಡೋವಾಗ ಆಲೋಚಿಸಬೇಕಿತ್ತು. ಕೊನೆ ಪಕ್ಷ ಅವರಿಗೂ ತಿಳಿಯದಿದ್ದರೆ ಸಂಸದ ನಳಿನ್ ಕುಮಾರ್ ಅವರಾದರೂ ವಿಜಯ ಬ್ಯಾಂಕ್ ನಮ್ಮದು ಎಂದು ಹೇಳಬೇಕಿತ್ತು. ಬ್ಯಾಂಕ್ ವಿಲೀನದ ಬಗ್ಗೆ ಸಂಸದರು ಮೌನವಾಗಿರುವುದು ಬೇಸರ ತಂದಿದೆ. ಇದು ಯಾವುದನ್ನೂ ಮಾಡದೇ ಮೋದಿ ಪೂಜೆ ಮಾಡುವ ಸಂಸದರು ನಮ್ಮ ಜಿಲ್ಲೆಗೆ ಕಳಂಕ. ಇವರಿಗೆ ಮೋದಿ ಭಕ್ತಿ ಜಾಸ್ತಿ ಆಗಿದ್ದು ಹೀಗಾಗಿ ಜಿಲ್ಲೆಯ ಬಗ್ಗೆ ಕಾಳಜಿ ಇಲ್ಲ.
ಹೀಗಾಗಿ ಸಂಸದರ ನಡೆಯಿಂದ ರೋಸಿ ಹೋಗಿರುವ ಕರಾವಳಿಯ ಜನತೆ ಮುಂದಿನ ದಿನಗಳಲ್ಲಿ ಜನರೇ ಅವರ ಬಟ್ಟೆ ಬರೆ ಹರಿಯುವ ದಿನ ದೂರವಿಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ ನಾನು ಅವರೊಂದಿಗೆ ಸೇರಿ ಸಂಸದ ಬಟ್ಟೆ ಹರಿಯುತ್ತೇನೆ ಎಂದು ಆಕ್ರೋಶಿತ ಮಾತುಗಳನ್ನಾಡಿದರು.