ವಿಶೇಶ ವರದಿ: ಹರ್ಷಿಣಿ ಉಡುಪಿ
ಉಡುಪಿ, ಮೇ 23 (DaijiworldNews/HR): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆ ಎಂದರೆ ಅದೇನೋ ಹೆಮ್ಮೆ, ಗೌರವ. ಉಡುಪಿ ಬುದ್ಧಿವಂತರ ಜಿಲ್ಲೆ ಎಂದೇ ಹೆಸರು ಪಡೆದಿದೆ. ಯಾಕೆಂದರೆ ಎಸ್ಎಸ್ಎಲ್ಸಿ ಪರೀಕ್ಷೆ ಆಗಲಿ ಪದವಿ ಪೂರ್ವ ಆಗಲಿ ಪಲಿತಾಂಶದಲ್ಲಿ ರಾಜ್ಯದಲ್ಲಿ ಮೇಲುಗೈ ಸಾಧಿಸುತ್ತಲೇ ಬಂದಿದೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇತ್ತೀಚಿನ ಕೆಲವು ತಿಂಗಳಿನಿಂದ ಹಿಂದೆ ನಡೆದ ಬೆಳವಣಿಗೆ ಹಿಜಾಬ್, ಕೇಸರಿ ಶಾಲು, ವಿದ್ಯಾರ್ಥಿಗಳ ನಡುವಿನ ಸಂಘರ್ಷದಿಂದ ಉಡುಪಿ ಬೇರೆ ರೀತಿಯಲ್ಲಿ ಗುರುತಿಸಿಕೊಂಡಿದೆ.
ಫಲಿತಾಂಶದಲ್ಲಿ ಅಗ್ರಸ್ಥಾನದಲ್ಲಿರುತ್ತಿದ್ದ ಉಡುಪಿ ಇದೀಗ ಕೆಲವು ಅಹಿತಕರ ಘಟನೆಗಳಿಗೆ ಸಾಕ್ಷಿಯಾದ್ದನ್ನು ಅಲ್ಲಗಳೆಯುವಂತಿಲ್ಲ. ಶೈಕ್ಷಣಿಕ ವಿಷಯ ಬಂದಾಗ ಗುಣಮಟ್ಟವು ಒಂದು ಮೇಲುಗೈ ಸಾಧಿಸುತ್ತವೆ. ಆದರೆ ಕಳೆದ ಕೆಲವು ವರ್ಷಗಳಿಂದ ಫಲಿತಾಂಶದ ಗ್ರಾಫ್ ಇಳಿಮುಖವಾಗುತ್ತಿದೆ. ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ 20 ನೇ ಸ್ಥಾನ ಪಡೆದುಕೊಂಡಿದ್ದರೆ, ಉಡುಪಿ 13ನೇ ಸ್ಥಾನ ಪಡೆದು ಸಂತೃಪ್ತಿ ಪಟ್ಟುಕೊಂಡಿದೆ.
ಹಾಗಂತ ಯಾವುದೇ ಶಿಕ್ಷಣ ಸಂಸ್ಥೆ ಗಳನ್ನು ಗುಣಮಟ್ಟದಲ್ಲಿ ದೂರುವಂತಿಲ್ಲ. ಪಲಿತಾಂಶದ ಹಿನ್ನಡೆಗೆ ತಾರ್ಕಿಕ ಕಾರಣ ಏನೇ ಇರಬಹುದು, ಆದರೆ ಎಲ್ಲಿ ಎಡವಿದ್ದೇವೆ ಎನ್ನುವ ವಿಮರ್ಶೆ ಮಾಡುವುದು ಕೂಡ ಅಷ್ಟೇ ಮುಖ್ಯ.
ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್, ಕೇಸರಿ ಶಾಲು ವಿವಾದಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಎಸ್ಎಲ್ಸಿ ಫಲಿತಾಂಶ ಮೊದಲಿನಂತೆ ಅಗ್ರಸ್ಥಾನ ಬರದಿರುವುದಕ್ಕೆ ಕಾರಣ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮೊದಲ 20 ಸ್ಥಾನಗಳ ಪಟ್ಟಿಯಲ್ಲಿ ಹಳೆ ಮೈಸೂರು ಭಾಗದ ಜಿಲ್ಲೆಗಳೇ ಇರುವುದು ಒಂದು ವಿಷಯವಾದರೆ, ಓದುವುದನ್ನು ಬಿಟ್ಟು, ಧರ್ಮದ ಹಿಂದೆ ಬಿದ್ದರೆ ಹೀಗೆಯೇ ಆಗುವುದು ಎನ್ನುವ ಅರ್ಥದಲ್ಲಿ ಟೀಕಿಸುತ್ತಿದ್ದಾರೆ.
ಕಳೆದ ಡಿಸೆಂಬರ್ ಅಂತ್ಯದಲ್ಲಿ ನಡೆದ ಬೆಳವಣಿಗೆ ಹಿಜಾಬ್, ಕೇಸರಿ ಶಾಲು ವಿವಾದಗಳು ಆರಂಭವಾಗಿ ತಾರಕ್ಕೇರಿತು. ಇದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ವಿದ್ಯಾರ್ಥಿಗಳಿಗೆ ರಜೆ ಕೂಡ ನೀಡಿದ್ದರು. ಕೇವಲ ಹಿಜಾಬ್ ತೆಗೆದು ಪರೀಕ್ಷೆಯನ್ನು ಎಲ್ಲರೂ ಪಾಲಿಸಿದ್ದಾರೆ. ಆಗಿಂದಾಗೆ ಭುಗಿಲೇಳುತ್ತಿದ್ದ ಈ ವಿವಾದಗಳು ವಿದ್ಯಾರ್ಥಿಗಳ ಮನಸಿನ ಮೇಲೂ ಪರಿಣಾಮ ಬೀರಿದೆ ಎನ್ನುವಂತದ್ದನ್ನು ಅಲ್ಲಗಳೆಯುವಂತಿಲ್ಲ. ಹಿಜಾಬ್ ವಿಚಾರ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಪ್ರಾರಂಭವಾಗಿ ಮುಂದೆ ಪ್ರೌಡ ಶಾಲೆ, ಕಾಲೇಜು ಎಲ್ಲಕಡೆ ಅವರಿಸಿತು. ಧರ್ಮ ದಂಗಲ್ ಮುಂದೆ ರಾಷ್ಟ್ರವ್ಯಾಪಿ ಕಾಡ್ಜಿಚ್ಚನಂತೆ ಪಸರಿಸಿತು.
ಉಡುಪಿ ಹಿಂದಿಲಿನಿಂದಲೂ ಉತ್ತಮ ಅಂಕ ಪಡೆದು ರಾಜ್ಯಕ್ಕೆ ಹೆಮ್ಮೆ ಪಡುವಂತೆ ಮಾಡಿತ್ತು. 2018 ರಲ್ಲಿ 88.18%, 2019 ರಲ್ಲಿ 87.97 % , 2020 ರಲ್ಲಿ ಇಲಾಖೆಯ ನಿರ್ಧಾರದಿಂದ 99.9 % ಅಂಕ ಪಡೆಯಲಾಗಿತ್ತು. 2022ರ ವೇಳೆಗೆ ಎಸ್ ಎಸ್ ಎಲ್ ಸಿ ಯ ಅಂಕ 89.46 ಶೇಕಡಕ್ಕೆ ಪಡೆದುಕೊಂಡಿದೆ . ಇದು ಗಮನಾರ್ಹ. ಶಿಕ್ಷಣ ತಜ್ಞರ ಪ್ರಕಾರ "ಕೋವಿಡ್ ಭೀತಿ ಮತ್ತು ಸಮಾಜದಲ್ಲಿ ನಡೆಯುತ್ತಿದ್ದ ಗೊಂದಲಗಳು ಹೊರತು ಪಡಿಸಿ, ಸರಿಯಾದ ಶಿಕ್ಷಣ ತರಬೇತುಗಳು ಸಿಕ್ಕಿದೆ. ಉಡುಪಿಯ ಶ್ರೇಣಿ ಎಲ್ಲಿಯೂ ಕುಸಿದಿಲ್ಲ. ಕೆಲವು ಕಾರಣಕ್ಕೆ ಶೇಖಡಾವಾರು ಕಡಿಮೆ ಆಗಿರಬಹುದು" ಎನ್ನುತ್ತಿದ್ದಾರೆ.
ಅದೇನೇ ಇದ್ದರೂ, ಉಡುಪಿ ಎಸ್ಎಸ್ಎಲ್ಸಿ ರಾಜ್ಯದ ಶ್ರೇಣಿಯಲ್ಲಿ ಕುಸಿತವಾದದ್ದು ಗಮನಾರ್ಹ.