ಉಡುಪಿ, ಮೇ 21(DaijiworldNews/DB): ಪೂರ್ವ ನಿರ್ಧಾರ ಇಲ್ಲದೆ ಬಿಜೆಪಿಗೆ ಸೇರ್ಪಡೆಯಾದವನು ನಾನು. ಬಿಜೆಪಿಯ ವ್ಯವಸ್ಥೆ ಉತ್ತಮವಾಗಿದೆ. ಸ್ಥಳೀಯ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಪಕ್ಷಕ್ಕೆ ಸೇರ್ಪಡೆ ಆಗಬೇಕು. ಆದರೆ ಕಾಂಗ್ರೆಸ್ನಲ್ಲಿ ಯಾರು ಬಂದು ಯಾರೂ ಕೂಡ ಹೋಗಬಹುದು ಎಂಬ ವ್ಯವಸ್ಥೆ ಇದೆ ಎಂದು ಬಿಜೆಪಿಗೆ ಇತ್ತೀಗಷ್ಟೇ ಸೇರ್ಪಡೆಯಾಗಿದ್ದ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬಿಜೆಪಿ ಸೇರಿದ್ದಕ್ಕೆ ಪ್ರಮೋದ್ ಪಶ್ಚಾತ್ತಾಪ ಪಡುತ್ತಾರೆ ಎನ್ನುವ ಡಿಕೆಶಿ ಮಾತಿಗೆ ತಿರುಗೇಟು ನೀಡಿದ ಅವರು, ಇಂದು ಜಿಲ್ಲಾ ಬಿಜೆಪಿಯ ಅಧ್ಯಕ್ಷರನ್ನು ಭೇಟಿ ಆಗಿದ್ದೇನೆ. ಯಾರಿಗೆಲ್ಲ ಬಿಜೆಪಿಗೆ ಸೇರಲು ಆಸಕ್ತಿಯಿದೆಯೋ ಗೊತ್ತಿಲ್ಲ. ನಾನು ಯಾರನ್ನು ಬಲವಂತ ಮಾಡುವುದಿಲ್ಲ. ಸ್ಥಳೀಯ ಬಿಜೆಪಿ ಕಾರ್ಯಕರ್ತರ ನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯ ಮುಂದಿನ ದಿನಗಳಲ್ಲಿ ನಡೆಯುತ್ತದೆ ಎಂದರು.
ಕಾಂಗ್ರೆಸ್ ಸಂಪ್ರದಾಯಕ್ಕೂ, ಬಿಜೆಪಿ ಸಂಪ್ರದಾಯಕ್ಕೂ ವ್ಯತ್ಯಾಸವಿದೆ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಲ್ಲರೂ ವೇದಿಕೆ ಹತ್ತುವವರೇ ಇದ್ದಾರೆ. ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ. ವೇದಿಕೆಯಲ್ಲಿ ಕೆಲವೇ ಕೆಲವು ಮಂದಿ ಇರುತ್ತಾರೆ. ಮಂತ್ರಿಗಳು, ಶಾಸಕರು, ಸಂಸದರು ಇದ್ದರೂ ಕೆಳಗೆ ಕುಳಿತುಕೊಳ್ಳಬೇಕು. ಬಿಜೆಪಿಯ ಸಂಪ್ರದಾಯವನ್ನು ಡಿಕೆಶಿಯವರು ಕಲಿಯುವುದು ಒಳ್ಳೆಯದು , ಇದು ನನ್ನ ಸಲಹೆ ಎಂದವರು ಡಿ.ಕೆ. ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
ವೇದಿಕೆಯನ್ನು ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ. ಕಾರ್ಯಕರ್ತನಾಗಿ ಕೆಳಗೆ ಕುಳಿತುಕೊಳ್ಳಲು ಯಾವ ಮುಜುಗರ, ಬೇಸರವೂ ಇಲ್ಲ. ಅದರಲ್ಲಿ ಸಮಸ್ಯೆ ಏನಿಲ್ಲ. ನಾನು ಯೋಚನೆ ಮಾಡಿಯೇ ತೆಗೆದುಕೊಂಡ ನಿರ್ಧಾರ. ಮುಂದೆ ಯಾವುದೇ ಪಶ್ಚಾತಾಪ ಪಟ್ಟುಕೊಳ್ಳುವ ಪ್ರಮೇಯ ಭವಿಷ್ಯತ್ತಿನಲ್ಲಿ ಬರಲಿಕ್ಕಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷ ನನ್ನ ಕಳೆದುಕೊಂಡು ಪಶ್ಚಾತ್ತಾಪ ಪಡುವ ದಿನ ಹೆಚ್ಚು ದೂರ ಇಲ್ಲ ಎಂಬುದು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಬಂದಾಗ ಅರಿವು ಆಗುಬಹುದು.
ಇನ್ನು ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಬಿಟ್ಟಿದ್ದೇವೆಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಕಾಂಗ್ರೆಸ್ ನಾಯಕರು ಪಶ್ಚಾತ್ತಾಪ ಪಡುವ ದಿನ ದೂರ ಇಲ್ಲ ಎಂದು ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ನಡೆಸಿದರು.