ಮಂಗಳೂರು, ಮೇ 21(DaijiworldNews/DB): ಮಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಪಾವೂರು-ಉಳಿಯಕುದ್ರು (ಇಸ್ಲೆ) ಪಾದಾಚಾರಿ ಸೇತುವೆ ಶುಕ್ರವಾರ ನೀರಿನಲ್ಲಿ ಕೊಚ್ಚಿ ಹೋಗಿದೆ.
ಪಾವೂರು-ಉಳಿಯಕುದ್ರು ನಡುವಿನ ಸಂಪರ್ಕಕ್ಕಾಗಿ ನೇತ್ರಾವತಿ ನದಿಗೆ 250 ಮೀಟರ್ ಉದ್ದದ ಈ ಸೇತುವೆ ಕಟ್ಟಲಾಗಿತ್ತು. ಶಾಶ್ವತ ಸೇತುವೆ ನಿರ್ಮಿಸುವಂತೆ ಕೋರಿ ಶಾಸಕ ಯು.ಟಿ. ಖಾದರ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿ ಬೇಸತ್ತ ಊರವರು ಕೊನೆಗೆ ದಾನಿಗಳ ಸಹಾಯದೊಂದಿಗೆ ಈ ಸೇತುವೆಯನ್ನು ನಿರ್ಮಿಸಿದ್ದರು. ಕಬ್ಬಿಣದ ರಚನೆಯೊಂದಿಗೆ ನಡೆದಾಡಲು ಮರದ ಹಲಗೆಗಳನ್ನು ಉಪಯೋಗಿಸಿ ಕಳೆದ ಕೆಲ ವರ್ಷಗಳ ಹಿಂದೆ 18 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ನದಿ ತಳಭಾಗದಲ್ಲಿ ಸೇತುವೆಗೆ ಆಧಾರಸ್ಥಂಬಗಳನ್ನು ಕೂಡಾ ಅಳವಡಿಸಲಾಗಿದೆ. ಆದರೆ ಭಾರೀ ಮಳೆಯು ಊರವರ ಶ್ರಮವನ್ನು ನೀರಿಗಾಹುತಿ ಮಾಡಿದೆ.
ಈ ಭಾಗದಲ್ಲಿ ಸುಮಾರು 60 ಕುಟುಂಬಗಳಿದ್ದು, ನಗರ ಸಂಪರ್ಕಿಸಲು ಈ ಸೇತುವೆಯೇ ಆಧಾರವಾಗಿತ್ತು. ಮಳೆಗಾಲದಲ್ಲಿ ನೇತ್ರಾವತಿ ತುಂಬಿ ಹರಿಯುವುದರಿಂದ ಮಕ್ಕಳಿಗೆ ಶಾಲೆಗೆ ತೆರಳಲು, ದಿನಗೂಲಿ ನೌಕರರು ಕೆಲಸಕ್ಕೆ ತೆರಳಲು ಅಥವಾ ಅಗತ್ಯ ಸಾಮಾನುಗಳನ್ನು ಕೊಂಡೊಯ್ಯಲು ನಗರಕ್ಕೆ ಆಗಮಿಸಲು ಇಲ್ಲಿನ ಜನರಿಗೆ ದಾರಿ ಇಲ್ಲದಾಗಿದೆ. ಇದೀಗ ಇದ್ದ ಒಂದು ಸೇತುವೆಯೂ ನದಿ ಪಾಲಾಗಿದ್ದು, ಜನರ ಕಷ್ಟ ಹೇಳ ತೀರದಾಗಿದೆ.
ಅಡ್ಯಾರ್ ಬಳಿ ರಾಷ್ಟೀಯ ಹೆದ್ದಾರಿ 75ರ ಸನಿಹ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಇಸ್ಲೇ ಪ್ರದೇಶವಿದೆ. ಶಾಶ್ವತ ಸೇತುವೆ ನಿರ್ಮಾಣದ ಇಲ್ಲಿನ ಜನರ ಬಹು ವರ್ಷಗಳ ಆಗ್ರಹಕ್ಕೆ ಯಾವುದೇ ಸರ್ಕಾರಗಳು ಈವರೆಗೆ ಸ್ಪಂದಿಸದೇ ಇರುವುದರಿಂದ ಅವರ ಕನಸು ಕನಸಾಗಿಯೇ ಉಳಿದಿದೆ. ರಾಜಕಾರಣಿಗಳಿಂದ ಬಾಯಿ ಮಾತಿನ ಭರವಸೆಯಷ್ಟೇ ಸಿಗುತ್ತಿದೆ. ಅಲ್ಲದೆ ಊರಿನವರು ಸೇತುವೆಗಾಗಿ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಹೊರ ಜಗತ್ತಿನ ಸಂಪರ್ಕಕ್ಕಾಗಿ ದೋಣಿಯನ್ನೇ ಅವಲಂಬಿಸಬೇಕಾಗಿ ಬಂದಿದೆ. ಆದರೆ ಮಳೆಗಾಲದಲ್ಲಿ ಇದೂ ಅಸಾಧ್ಯ.
ಈ ಭಾಗದಲ್ಲಿ ಬೀದಿದೀಪಗಳಾಗಲೀ, ಅಂಗಡಿಗಳಾಗಲೀ, ವೈದ್ಯಕೀಯ ಅವಶ್ಯಕತೆಗಳಾಗಲೀ ಇಲ್ಲ. ಆದ್ದರಿಂದ ಪ್ರತಿಯೊಂದಕ್ಕೂ ಇಲ್ಲಿನ ಜನ ಮಂಗಳೂರು ನಗರ, ಅಡ್ಯಾರ್ ಅಥವಾ ಫರಂಗಿಪೇಟೆಯನ್ನು ಅವಲಂಬಿಸಬೇಕಾಗಿ ಬಂದಿದೆ.
ಇಲ್ಲಿನ ನಿವಾಸಿಗಳ ಪೈಕಿ ಹಲವರು ಮೀನುಗಾರಿಕೆ ಮತ್ತು ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಮರಳು ಮಾಫಿಯಾ ಮತ್ತು ಇತರ ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಮೀನುಗಾರಿಕೆ ಚಟುವಟಿಕೆ ಮೇಲೆಯೂ ಪರಿಣಾಮ ಬೀರಿತ್ತಿದ್ದು, ಅನಿವಾರ್ಯವಾಗಿ ಇಸ್ಲೆಯ ಹೊರಭಾಗದಲ್ಲಿ ಹೋಗಿ ದುಡಿಯಬೇಕಾದ ಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.